ಮೊದಲ ಟೆಸ್ಟ್: ಸೋಲಿನ ದವಡೆಗೆ ಸಿಲುಕಿದ ಭಾರತ

ಕೇಪ್‌ಟೌನ್, ಜ.8: ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ಸೋಲಿನ ದವಡೆಗೆ ಸಿಲುಕಿದೆ.
ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ನ ನಾಲ್ಕನೇ ದಿನವಾಗಿರುವ ಸೋಮವಾರ ಗೆಲುವಿಗೆ ಎರಡನೇ ಇನಿಂಗ್ಸ್‌ನಲ್ಲಿ 208 ರನ್‌ಗಳ ಸವಾಲನ್ನು ಪಡೆದಿರುವ ಟೀಮ್ ಇಂಡಿಯಾವು ದಕ್ಷಿಣ ಆಫ್ರಿಕದ ಬೌಲರ್‌ಗಳಾದ ಫಿಲ್ಯಾಂಡರ್ , ಮೊರ್ನೆ ಮೊರ್ಕೆಲ್ ಮತ್ತು ರಬಾಡ ದಾಳಿಗೆ ತತ್ತರಿಸಿದೆ. ಭಾರತ 37 ಓವರ್‌ಗಳ ಮುಕ್ತಾಯಕ್ಕೆ 7 ವಿಕೆಟ್ ನಷ್ಟದಲ್ಲಿ 112 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 96 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ.
ಮುರಳಿ ವಿಜಯ್(13), ಶಿಖರ್ ಧವನ್(16), ಚೇತೇಶ್ವರ ಪೂಜಾರ(4), ವಿರಾಟ್ ಕೊಹ್ಲಿ(28), ರೋಹಿತ್ ಶರ್ಮಾ(10), ವೃದ್ಧಿಮಾನ್ ಸಹಾ(8), ಹಾರ್ದಿಕ್ ಪಾಂಡ್ಯ(1), ಔಟಾಗಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್ ಸೋಲು ತಪ್ಪಿಸಲು ಹೋರಾಟ ಮುಂದುವರಿಸಿದ್ದಾರೆ.
ದಕ್ಷಿಣ ಆಫ್ರಿಕ 130ಕ್ಕೆ ಆಲೌಟ್
ಭಾರತದ ವೇಗದ ಬೌಲರ್‌ಗಳ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕ ತಂಡ ಎರಡನೇ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟಾಗಿದೆ.
ಎರಡನೇ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕ ಎರಡನೇ ಇನಿಂಗ್ಸ್‌ನಲ್ಲಿ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 65 ರನ್ ಗಳಿಸಿತ್ತು. ಕಾಗಿಸೊ ರಬಾಡ ಔಟಾಗದೆ 2ರನ್ ಮತ್ತು ಹಾಸಿಮ್ ಅಮ್ಲ ಔಟಾಗದೆ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇದರೊಂದಿಗೆ ದಕ್ಷಿಣ ಆಫ್ರಿಕ 142 ರನ್‌ಗಳ ಮುನ್ನಡೆ ಸಾಧಿಸಿತ್ತು. ಮೂರನೇ ದಿನ ಮಳೆಯಿಂದಾಗಿ ಆಟ ನಡೆಯಲಿಲ್ಲ.
ನಾಲ್ಕನೇ ದಿನವಾಗಿರುವ ಸೋಮವಾರ ಭಾರತದ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಮುಂದೆ ಆಫ್ರಿಕದ ಬ್ಯಾಟಿಂಗ್ ನಡೆಯಲಿಲ್ಲ.ಭಾರತದ ವೇಗದ ಬೌಲರ್‌ಗಳಾದ ಮುಹಮ್ಮದ್ ಶಮಿ(28ಕ್ಕೆ 3), ಜಸ್‌ಪ್ರೀತ್ ಬುಮ್ರಾ (39ಕ್ಕೆ 3) ,ಭುವನೇಶ್ವರ ಕುಮಾರ್(33ಕ್ಕೆ 2), ಮತ್ತು ಹಾರ್ದಿಕ್ ಪಾಂಡ್ಯ(27ಕ್ಕೆ 2) ದಾಳಿಯನ್ನು ಎದುರಿಸಲಾರದೆ ದಕ್ಷಿಣ ಆಫ್ರಿಕ ಬೇಗನೇ ಎರಡನೇ ಇನಿಂಗ್ಸ್ ಮುಗಿಸಿತು.
ಹಾಶಿಮ್ ಅಮ್ಲ (4)ಎರಡನೇ ದಿನ ಗಳಿಸಿದ್ದ ಮೊತ್ತಕ್ಕೆ ಒಂದು ರನ್ ಕೂಡಾ ಸೇರಿಸದೆ ಶಮಿಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನ ಹಿಂದೆ ನೈಟ್‌ವಾಚ್‌ಮೇನ್ ಕಾಗಿಸೊ ರಬಾಡ (5) ಔಟಾದರು.
ಎಬಿ ಡಿವಿಲಿಯರ್ಸ್ ಏಕಾಂಗಿ ಹೋರಾಟ ನಡೆಸಿದರು. ಇವರಿಗೆ ತಂಡದ ಯಾರಿಂದಲೂ ಉತ್ತಮ ಬೆಂಬಲ ದೊರೆಯಲಿಲ್ಲ. ನಾಯಕ ಎಫ್‌ಡು ಪ್ಲೆಸಿಸ್(0) ಅವರಿಗೆ ಜಸ್‌ಪ್ರೀತ್ ಬುಮ್ರಾ ಖಾತೆ ತೆರೆಯಲು ಬಿಡಲಿಲ್ಲ. 82ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕ ಬಳಿಕ 48 ರನ್ ಸೇರಿಸುವಷ್ಟರಲ್ಲಿ ಉಳಿದ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.ಕ್ವಿಂಟನ್ ಡಿ ಕಾಕ್ 2 ಬೌಂಡರಿ ಬಾರಿಸಿ ಜಸ್‌ಪ್ರೀತ್ ಎಸೆತದಲ್ಲಿ ಸಹಾಗೆ ಕ್ಯಾಚ್ ನೀಡಿದರು. ವೆರ್ನಾನ್ ಫಿಲ್ಯಾಂಡರ್ 10 ಎಸೆತಗಳನ್ನು ಎದುರಿಸಿದ್ದರೂ ಖಾತೆ ತೆರೆಯಲಿಲ್ಲ. ಅವರನ್ನು ಮುಹಮ್ಮದ್ ಶಮಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಎಂಟನೆ ವಿಕೆಟ್‌ಗೆ ಕೇಶವ್ ಮಹಾರಾಜ್ ಮತ್ತು ಎಬಿ ಡಿವಿಲಿಯರ್ಸ್ ಜೊತೆಯಾಟದಲ್ಲಿ 27 ರನ್ ಸೇರಿಸಿದರು. ಕೇಶವ್ ಮಹಾರಾಜ್ (15)ಅವರು ಭುವನೇಶ್ವರ್ ಎಸೆತದಲ್ಲಿ ಸಹಾಗೆ ಕ್ಯಾಚ್ ನೀಡಿದರು.ಮೊರ್ನೆ ಮೊರ್ಕೆಲ್ (2)ಅವರು ಭುವನೇಶ್ವರ್ ಅವರ ಬೌನ್ಸರ್‌ನ್ನು ಎದುರಿಸುವಲ್ಲಿ ಎಡವಿದರು. ಅವರ ಬ್ಯಾಟ್‌ನ್ನು ಸ್ಪರ್ಶಿಸಿ ಹಾರಿದ ಚೆಂಡನ್ನು ಸಹಾ ಕ್ಯಾಚ್ ತೆಗೆದುಕೊಳ್ಳುವುದರೊಂದಿಗೆ ಆಫ್ರಿಕದ 9ನೇ ವಿಕೆಟ್ ಪತನಗೊಂಡಿತು. ಅಂತಿಮವಾಗಿ ಜಸ್‌ಪ್ರೀತ್ ಬುಮ್ರಾ ಅವರು ಎಬಿಡಿ ವಿಲಿಯರ್ಸ್ ಅವರ ಏಕಾಂಗಿ ಹೋರಾಟವನ್ನು ಕೊನೆಗೊಳಿಸಿದರು. ವಿಲಿಯರ್ಸ್ 50 ಎಸೆತಗಳನ್ನು ಎದುರಿಸಿ 2 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 35 ರನ್ ಗಳಿಸಿದರು. ಡೇಲ್ ಸ್ಟೇಯ್ನ್ ಖಾತೆ ತೆರೆಯಲಿಲ್ಲ. ಅವರು ಅಜೇಯರಾಗಿ ಉಳಿದರು. ಭಾರತದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಐದು ಕ್ಯಾಚ್ ಪಡೆದರು. ಮೊದಲ ಇನಿಂಗ್ಸ್‌ನಲ್ಲೂ 5 ಕ್ಯಾಚ್ ಪಡೆದಿದ್ದರು. 10ಕ್ಯಾಚ್‌ಗಳೊಂದಿಗೆ ದಾಖಲೆ ನಿರ್ಮಿಸಿದರು.







