ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಭಾರತ ಏಶ್ಯಾದಲ್ಲಿ ಎಷ್ಟನೆ ಸ್ಥಾನದಲ್ಲಿದೆ ಗೊತ್ತಾ?

ಹೊಸದಿಲ್ಲಿ, ಜ. 8: ಇತ್ತೀಚೆಗೆ ಲಭ್ಯವಾದ ಅಂಕಿ-ಅಂಶಗಳ ಪ್ರಕಾರ 2016ರಲ್ಲಿ 9,474, 2015ರಲ್ಲಿ 8,934 ಹಾಗೂ 2014ರಲ್ಲಿ 8,068 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 2014ರಲ್ಲಿ 2,403, 2015ರಲ್ಲಿ 2,646 ಹಾಗೂ 2016ರಲ್ಲಿ 2,413 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈಯುಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಪಟ್ಟಿಯಲ್ಲಿ 2016 ಹಾಗೂ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ‘ಜಸ್ಟಿಸ್ ಅಂಡರ್ ಟ್ರಯಲ್: ಎ ಸ್ಟಡಿ ಆಫ್ ಪ್ರಿ-ಟ್ರಯಲ್ ಡಿಟೆನ್ಶನ್ ಇನ್ ಇಂಡಿಯಾ’ ವರದಿ ಪ್ರಕಾರ ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಭಾರತ ಜಗತ್ತಿನಲ್ಲೇ 18ನೇ ಸ್ಥಾನದಲ್ಲಿದೆ ಹಾಗೂ ಏಶ್ಯಾದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ ನಾಲ್ವರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ಹೇಳಿದೆ.
ಸರಕಾರದ ಇತ್ತೀಚೆಗಿನ ಅಂಕಿ-ಅಂಶದ ಪ್ರಕಾರ 2014 ಹಾಗೂ 2016ರ ನಡುವೆ 26,416 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಶೇ. 28.24 ಅಥವಾ 7,462 ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶ ನಿರೀಕ್ಷೆಯಂತೆ ಇರದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಒಟ್ಟು ಜನರಲ್ಲಿ ಶೇ. 6-7 ವಿದ್ಯಾರ್ಥಿಗಳು ಹಾಗೂ ಇವರಲ್ಲಿ ಶೇ. 40-50 ವಿದ್ಯಾರ್ಥಿನಿಯರು ಎಂದು ವರದಿ ತಿಳಿಸಿದೆ.