ಬೆಂಗಳೂರು: ಅತ್ಯಾಧುನಿಕ ಫ್ಲೈಬಸ್ ಸೇವೆಗೆ ಚಾಲನೆ

ಬೆಂಗಳೂರು, ಜ 8: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೇಲಂ ಹಾಗೂ ಮಡಿಕೇರಿಗೆ ಸೋಮವಾರದಿಂದ ಫ್ಲೈ ಬಸ್ ಸೇವೆ ಆರಂಭಗೊಂಡಿದೆ. ಸಾರಿಗೆ ಸಚಿವ ಎಚ್.ಎಂ ರೇವಣ್ಣ ಫ್ಲೈಬಸ್ ಸೇವೆಗೆ ಚಾಲನೆ ನೀಡಿದರು.
ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಫ್ಲೈ ಬಸ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇವು 14.5 ಮೀಟರ್ ಇದ್ದು, ದೇಶದಲ್ಲೆ ಅತಿಹೆಚ್ಚು ಉದ್ದದ ಬಸ್ಸುಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. 48 ಆಸನಗಳನ್ನು ಹೊಂದಿರುವ ಬಸ್‌ನಲ್ಲಿ ಎಸಿ, ವೈಫೈ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಸೇರಿದಂತೆ ಶೌಚಾಲಯ ಸೌಲಭ್ಯ ಇದೆ.
ಫ್ಲೈ ಬಸ್ ಸೇವೆಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, 2014ನೆ ಸಾಲಿನಿಂದ ಮೈಸೂರು ಹಾಗು ಕುಂದಾಪುರ ಮಾರ್ಗದಲ್ಲಿ ಫ್ಲೈಬಸ್‌ಗಳು ಸಂಚಾರ ಮಾಡುತ್ತಿವೆ. ಪ್ರಸಕ್ತ ಫ್ಲೈಬಸ್‌ಗಳು ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡಿದ್ದು, ಪ್ರಯಾಣಿಕ ಸ್ನೇಹಿಯಾಗಿ ಅತ್ಯುತ್ತಮ ಸೇವೆ ಒದಗಿಸುತ್ತಿವೆ. ಹೀಗಾಗಿ ಫ್ಲೈಬಸ್ ಪ್ರಯಾಣಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೇಲಂ, ಮಡಿಕೇರಿ ಮಾರ್ಗದ 3 ಫ್ಲೈಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ ಎಂದರು.
ಲಾಭದಾಯಕ: ವಜ್ರ, ವೋಲ್ವೋ ಬಸ್‌ಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಬಸ್‌ಗಳು ಲಾಭದಾಯಕವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣದಿಂದ ತಿರುಪತಿ ಹಾಗೂ ಕ್ಯಾಲಿಕಟ್ ಮಾರ್ಗದಲ್ಲಿ ಸಂಚಾರ ನಡೆಸಲು ಕೆಎಸ್‌ಆರ್ಟಿಸಿ ನಿರ್ಧರಿಸಿದೆ. ಅಂತಾರಾಜ್ಯ ಸಂಚಾರಕ್ಕೆ ಈಗಾಗಲೇ ತೆಲಂಗಾಣ, ಆಂಧ್ರಪ್ರದೇಶ, ಕೇರಳ ರಾಜ್ಯಗಳ ಸಾರಿಗೆ ಸಚಿವರ ಜತೆ ಮಾತುಕತೆ ನಡೆಸಲಾಗಿದೆ. ಕೇರಳ ರಾಜ್ಯದಿಂದ ಒಪ್ಪಿಗೆ ಸಿಕ್ಕಿಲ್ಲ. ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಅನುಮತಿ ಸಿಕ್ಕರೆ ಅಂತಾರಾಜ್ಯಗಳಿಗೆ ಫ್ಲೈಬಸ್ ಸಂಚರಿಸಲಿವೆ ಎಂದು ಎಚ್.ಎಂ.ರೇವಣ್ಣ ಹೇಳಿದರು.
ಟಿಕೆಟ್ ದರ: ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣದಿಂದ ಸೇಲಂಗೆ 800ರೂ. ಜತೆಗೆ ತೆರಿಗೆ ಸೇರಿದೆ. ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣದಿಂದ ಮಡಿಕೇರಿಗೆ 1ಸಾವಿರ ರೂ. ಜತೆಗೆ ತೆರಿಗೆ ಒಳಗೊಂಡಿದೆ.
ಸಾರಿಗೆ ಇಲಾಖೆ ನೌಕರರ ವರ್ಗಾವಣೆಗೆ 14 ಸಾವಿರ ಅರ್ಜಿಗಳು ಬಂದಿದ್ದವು. ಅದರಲ್ಲಿ ಹಿರಿತನದ ಆಧಾರದ ಮೇಲೆ 3950 ಅರ್ಜಿಗಳನ್ನು ಅಂತಿಮಗೊಳಿಸಲಾಗಿದೆ. ಇನ್ನುಳಿದಂತೆ 1 ಸಾವಿರ ಅರ್ಜಿಗಳನ್ನು ಕೌನ್ಸಲಿಂಗ್ ನಡೆಸಿ ವರ್ಗಾವಣೆ ಆದೇಶ ನೀಡಲು ನಿರ್ಧರಿಸಲಾಗಿದೆ.
-ಎಚ್.ಎಂರೇವಣ್ಣ, ಸಾರಿಗೆ ಸಚಿವ







