ಕೋಮುವಾದಿ ಬಿಜೆಪಿಯಿಂದ 'ಹೆಣ ರಾಜಕಾರಣ': ಸಿಎಂ ಸಿದ್ದರಾಮಯ್ಯ
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ

ಬ್ರಹ್ಮಾವರ, ಜ.8: ಜಾತಿ, ಧರ್ಮ ಹೆಸರಿನಲ್ಲಿ ಬೆಂಕಿ ಹಚ್ಚಿ, ಹೆಣದ ಮೇಲೆ ರಾಜಕಾರಣ ಮಾಡುವ ಬಿಜೆಪಿಯವರಿಗೆ ಈ ರಾಜ್ಯದ ಅಧಿಕಾರ ಕೊಡಬಾರದು. ಅಧಿಕಾರ, ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ, ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುವವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ಕು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಒಟ್ಟು 581 ಕೋಟಿ ರೂ. ಮೊತ್ತದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಸೋಮವಾರ ನೆರವೇರಿಸಿ ಅವರು ಮಾತನಾಡುತಿದ್ದರು.
ರಾಜಕೀಯದಲ್ಲಿ ಧರ್ಮ ಇರಬೇಕು. ಹೀಗಾಗಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ. ಆದರೆ ಕೋಮುವಾದ ಧರ್ಮ ಅಲ್ಲ. ಇನ್ನೊಂದು ಧರ್ಮದವರನ್ನು ಧ್ವೇಷಿಸುವವರು ಕೋಮುವಾದಿಗಳು. ಸ್ವ ಧರ್ಮದಲ್ಲಿ ನಿಷ್ಠೆ ಹೊಂದಿ ಇನ್ನೊಂದು ಧರ್ಮದ ಬಗ್ಗೆ ಸಹಿಷ್ಣುತೆ ಇರುವವರು ಧರ್ಮ ಪಾಲಕರು. ಹಾಗಾಗಿ ಕೋಮುವಾದಿಗಳು ಮತ್ತೆ ಅಧಿಕಾರಕ್ಕೆ ಬರಬಾರದು ಎಂದರು.
ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಬಡವರನ್ನು ದೂರ ಇಟ್ಟರೆ ಹೇಗೆ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಆಗಲು ಸಾಧ್ಯ. ಎಲ್ಲ ಜನರನ್ನು ಒಟ್ಟಿಗೆ ತೆಗೆದು ಕೊಂಡು ಹೋಗಿ ಸಮಾನ ಅವಕಾಶ, ಸಮಾನ ಗೌರವ ಕೊಡುವುದೇ ಸಬ್ ಕಾ ಸಾತ್, ಸಬ್ ಕಾ ವಿಕಾಸ್. ಮೋದಿ ಮನ್ ಕೀ ಬಾತ್ ಬರೀ ಖಾಲೀ ಬಾತ್ ಆಗಿದೆ. ಅವರು ಜನರಿಗಾಗಿ ಏನು ಮಾಡಿಲ್ಲ. ಈ ಖಾಲಿ ಮನ್ ಕೀ ಬಾತ್‌ಗೆ ಮಣೆ ಹಾಕಬೇಡಿ. ನಮ್ಮದು ಕಾಮ್ ಕೀ ಬಾತ್. ಕೆಲಸ ಮಾಡಿದವರಿಗೆ ಕೂಲಿ ಕೊಡಿ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
0% ಬಡ್ಡಿ ದರದಲ್ಲಿ ಸಾಲ: ಫೆಬ್ರವರಿಯಲ್ಲಿ ಮುಂಡಿಸುವ ಬಜೆಟ್‌ನಲ್ಲಿ ಮೀನುಗಾರರ ಸಹಕಾರಿ ಸಂಘದವರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗು ವುದು. ರಾಜ್ಯದ ರೈತರ ಮೇಲೆ 52 ಸಾವಿರ ಕೋಟಿ ರೂ. ಅಲ್ಪಾವಧಿ ಸಾಲ ಇದ್ದು, ಇದರಲ್ಲಿ 42 ಸಾವಿರ ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡಿದರೆ 10,730 ಕೋಟಿ ರೂ. ಸಾಲವನ್ನು ಸಹಕಾರಿ ಸೊಸೈಟಿಗಳು ನೀಡಿವೆ. ಸೊಸೈಟಿಯಲ್ಲಿ 22,27,506 ರೈತರಿಗೆ ನೀಡಿರುವ 8,165 ಕೋಟಿ ರೂ. ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಿದೆ ಎಂದು ಅವರು ಹೇಳಿದರು.
ಅಂಗನವಾಡಿ ಮಕ್ಕಳಿಗೆ ಉಚಿತ ಹಾಲು ಮತ್ತು ಮೊಟ್ಟೆ ನೀಡುವ ಯೋಜನೆಯಿಂದ ಮಕ್ಕಳ ಹಾಜರಾತಿ ಜಾಸ್ತಿಯಾಗಿ, ಮಕ್ಕಳಲ್ಲಿರುವ ಅಪೌಷ್ಠಿಕತೆ ಕಡಿಮೆ ಆಗಿದೆ. ಕ್ಷೀರಧಾರೆ ಯೋಜನೆಯ ಮೂಲಕ ಪ್ರತಿ ಲೀಟರ್ ಹಾಲಿಗೆ 5 ರೂ. ಸಬ್ಸಿಡಿ ನೀಡುವುದರಿಂದ ಪ್ರತಿದಿನ ಕೆಎಂಎಫ್‌ಗೆ 75 ಲಕ್ಷ ಲೀಟರ್ ಹಾಲು ಬರುತ್ತಿದೆ. 157 ಎಪಿಎಂಸಿಗಳಲ್ಲಿ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಬಂದ ನಂತರ ರೈತರ ಆದಾಯ ಶೇ. 38ರಷ್ಟು ಜಾಸ್ತಿಯಾಗಿದೆ. ಇಡೀ ದೇಶಕ್ಕೆ ಮಾದರಿಯಾಗಿರುವ ಈ ಯೋಜನೆಯನ್ನು ಉಳಿದ ರಾಜ್ಯಗಳಲ್ಲೂ ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದರು.
ರಾಜ್ಯದೆಲ್ಲೆಡೆ ಇಂದಿರಾ ಕ್ಯಾಂಟಿನ್: ಬೆಂಗಳೂರಿನಲ್ಲಿ 200 ಇಂದಿರಾ ಕ್ಯಾಂಟಿನ್ ಆರಂಭಿಸಿದ್ದು, ಮಾರ್ಚ್ ಒಳಗಡೆ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲಾಗುವುದು. ಈ ತಿಂಗಳಲ್ಲಿ ಅನಿಲ ಭಾಗ್ಯ ಹಾಗೂ ಖಾಸಗಿ ಹಾಗೂ ಸರಕಾರ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅನ್ನಭಾಗ್ಯ ಯೋಜನೆಯ ಮೂಲಕ ಹಸಿವು ಮುಕ್ತ ಕರ್ನಾಟಕ ಮಾಡಲಾಗಿದೆ. ಈಗ ಯಾರು ಕೂಡ ಅನ್ನಕ್ಕಾಗಿ ಇನ್ನೊಬ್ಬರ ಮುಂದೆ ಕೈ ಚಾಚುತ್ತಿಲ್ಲ. ಬರಗಾಲ ಬಂದರೂ ಗುಳೆ ಹೋಗುತ್ತಿಲ್ಲ. ಹಸಿವಿನಿಂದ ಸತ್ತ ಪ್ರಕರಣಗಳು ಎಲ್ಲೂ ದಾಖಲಾಗಿಲ್ಲ. ಬಿಜೆಪಿ ಅಧಿಕಾರ ಇರುವ 19 ರಾಜ್ಯಗಳ ಪೈಕಿ ಒಂದ ರಲ್ಲೂ ಉಚಿತ ಅಕ್ಕಿ ನೀಡುವ ಯೋಜನೆ ಇಲ್ಲ ಎಂದರು.
ವೇದಿಕೆಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಎಂ.ಎ.ಗಫೂರ್, ಬ್ಲೋಸಂ ಫೆರ್ನಾಂಡಿಸ್, ಜಿ.ಎ.ಬಾವಾ, ನರಸಿಂಹಮೂರ್ತಿ, ಮೀನಾಕ್ಷಿ ಮಾಧವ ಬನ್ನಂಜೆ, ಬಸವರಾಜ್, ಜನಾರ್ದನ ತೋನ್ಸೆ, ಎಂ.ಎನ್.ರಾಜೇಂದ್ರ ಕುಮಾರ್, ಸಂಧ್ಯಾ ತಿಲಕ್‌ರಾಜ್, ನಿತ್ಯಾನಂದ ಶೆಟ್ಟಿ, ಸತೀಶ್ ಅಮೀನ್ ಪಡುಕೆರೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಒ ಶಿವಾ ನಂದ ಕಾಪಶಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತಾಲೂಕು ಪ್ರಗತಿ ಪಥದ ಹೊತ್ತಿಗೆಯನ್ನು ಮುಖ್ಯಮಂತ್ರಿ ಅನಾವರಣಗೊಳಿಸಿದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಗಳನ್ನು ವಿತರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಹಾವಂಜೆ ಕಾರ್ಯ ಕ್ರಮ ನಿರೂಪಿಸಿದರು.
ಯಡ್ಡಿಯ ‘ಮಿಶನ್ 150’ ಈಗ ‘ಮಿಶನ್ 50’!
ಹೋದಲ್ಲೆಲ್ಲ ಯಡಿಯೂರಪ್ಪ ಹೇಳುತ್ತಿದ್ದ ‘ಮಿಶನ್ 150’ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಬಳಿಕ ಟುಸ್ ಆಗಿ, ಈಗ ಮಿಶನ್ 50 ಆಗಿದೆ. ಅದಕ್ಕೆ ಯಡಿಯೂರಪ್ಪ, ಶೋಭಾ ಹೋದ ಕಡೆಗಳಲ್ಲಿ ಬಾಯಿ ಬಂದಂತೆ ಮಾತನಾಡುತ್ತಿದ್ದಾರೆ. ಇವರ ಕೈಗೆ ಅಧಿಕಾರ ಕೊಡ ಬಾರದು. ಮತ್ತೆ ನಮಗೆ ಅಧಿಕಾರ ಕೊಡಿ ಕರ್ನಾಟಕ ರಾಜ್ಯವನ್ನು ನಂಬರ್ 1 ಸ್ಥಾನಕ್ಕೆ ಕೊಂಡು ಹೋಗಿ ನವ ಕರ್ನಾಟಕ ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಆಡಳಿತ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹಸಿರು ಶಾಲು ಹಾಕಿಕೊಂಡು ತಿರುಗುವ ಮಿ. ಯಡಿಯೂರಪ್ಪ ಹೇಳಿದ್ದರು. ಆದರೆ ನಾವು ಮಾಡಿ ತೋರಿಸಿದ್ದೇವೆ. ಆದರೆ ನಾವು ರೈತರ ಮಕ್ಕಳು ಅಲ್ಲ ಅಂತೆ. ರೈತ ಹೋರಾಟಗಾರರು, ಮಣ್ಣಿನ ಮಕ್ಕಳು ಹೇಳಿಕೊಳ್ಳುತ್ತಿರುವ ಇವರೆಲ್ಲ ಬರೀ ಡೋಂಗಿಗಳು ಎಂದು ಅವರು ವ್ಯಂಗ್ಯವಾಡಿದು.
‘ಜೈಲಿಗೆ ಹೋದವರನ್ನು ಮರೆತರೂ ಅನ್ನ ನೀಡಿದವರನ್ನು ಮರೆಯಲ್ಲ’
ಈಗಾಗಲೇ ಪ್ರವಾಸ ಮಾಡಿರುವ ಎಲ್ಲ 24 ಜಿಲ್ಲೆಗಳಲ್ಲಿಯೂ ಜನ ಸರಕಾರದ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಎಲ್ಲೂ ಕೂಡ ಸರಕಾರದ ವಿರುದ್ಧ ವಾದ ಅಲೆ ಇಲ್ಲ. ಬದಲಾಗಿ ಸರಕಾರದ ಪರವಾದ ಅಲೆ ಇದೆ. ನಾವು ನೀಡಿದ 165 ಪ್ರಣಾಳಿಕೆಗಳ ಪೈಕಿ ಈಗಾಗಲೇ 155 ಭರವಸೆಯನ್ನು ಈಡೇರಿಸಿದ್ದು, ಮಾರ್ಚ್ ಒಳಗೆ ಎಲ್ಲ ಭರವಸೆಗಳನ್ನು ಈಡೇರಿಸಿ ಮತ್ತೆ 2018ರ ಚುನಾವಣೆಯಲ್ಲಿ ಆಶೀರ್ವಾದ ಕೇಳಲು ಜನರ ಮುಂದೆ ಬರುತ್ತೇವೆ. ಕರ್ನಾಟಕದ ಜನ ಜೈಲಿಗೆ ಹೋಗಿ ಬಂದವರನ್ನು ಮರೆತು ಬಿಡುತ್ತಾರೆ. ಆದರೆ ಅನ್ನ, ವಸತಿ, ಶಿಕ್ಷಣ, ನೀರು ಕೊಟ್ಟವರನ್ನು ಎಂದಿಗೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.







