ಸಮುದ್ರದ ಮೂಲಕ ಹಜ್ ಯಾತ್ರಿಗಳ ರವಾನೆ: ಭಾರತದ ಯೋಜನೆಯನ್ನು ಪುರಸ್ಕರಿಸಿದ ಸೌದಿ

ಹೊಸದಿಲ್ಲಿ, ಜ.8: ಹಜ್ ಯಾತ್ರಿಕರನ್ನು ಸಮುದ್ರದ ಮೂಲಕ ಜಿದ್ದಾಗೆ ಸಾಗಿಸುವ ಭಾರತದ ಯೋಜನೆಯನ್ನು ಸೌದಿ ಅರೇಬಿಯವು ಪುರಸ್ಕರಿಸಿದೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಸೋಮವಾರ ತಿಳಿಸಿದ್ದಾರೆ. ಮಕ್ಕಾದಲ್ಲಿ ಭಾರತ ಮತ್ತು ಸೌದಿ ಅರೇಬಿಯದ ಮಧ್ಯೆ ವಾರ್ಷಿಕ ಹಜ್ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ನಖ್ವಿ, ಈ ಹೇಳಿಕೆಯನ್ನು ನೀಡಿದ್ದಾರೆ. “ಸೌದಿ ಅರೇಬಿಯವು ಹಜ್ ಯಾತ್ರಿಕರನ್ನು ಸಮುದ್ರ ಹಾದಿಯ ಮೂಲಕ ಸಾಗಿಸುವ ಯೋಜನೆಗೆ ಅನುಮತಿ ನೀಡಿದ್ದು, ಎರಡೂ ದೇಶಗಳ ಅಧಿಕಾರಿಗಳು ಈ ಬಗ್ಗೆ ತಾಂತ್ರಿಕ ಮತ್ತು ಆಡಳಿತಾತ್ಮಕವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಹಾಗಾಗಿ ಮುಂದಿನ ವರ್ಷಗಳಲ್ಲಿ ಸಮುದ್ರ ಹಾದಿಯ ಮೂಲಕ ಹಜ್ ಯಾತ್ರಿಗಳ ಪ್ರಯಾಣ ಆರಂಭವಾಗಲಿದೆ” ಎಂದು ನಖ್ವಿ ತಿಳಿಸಿದ್ದಾರೆ.
ಹಡಗುಗಳ ಮೂಲಕ ಯಾತ್ರಿಗಳನ್ನು ಕಳುಹಿಸುವುದರಿಂದ ಪ್ರಯಾಣದ ವೆಚ್ಚದಲ್ಲಿ ಗಣನೀಯ ಇಳಿಕೆಯಾಗಲಿದೆ. ಹಾಗಾಗಿ ಈ ಕ್ರಮವು ಕ್ರಾಂತಿಕಾರಿ, ಬಡವರ ಪರ ಮತ್ತು ಯಾತ್ರಿಸ್ನೇಹಿಯಾಗಿದೆ ಎಂದವರು ಇದೇ ವೇಳೆ ವಿವರಿಸಿದರು. ಈ ಹಿಂದೆಯೂ ಮುಂಬೈ ಮತ್ತು ಜಿದ್ದಾದ ಮಧ್ಯೆ ಹಜ್ ಯಾತ್ರಿಗಳನ್ನು ಜಲಹಾದಿಯ ಮೂಲಕ ಸಾಗಿಸುವ ವ್ಯವಸ್ಥೆಯಿತ್ತು. ಆದರೆ ಅದನ್ನು 1995ರಲ್ಲಿ ಸ್ಥಗಿತಗೊಳಿಸಲಾಗಿತ್ತು.
ಇದೇ ಮೊದಲ ಬಾರಿ ಮಹಿಳೆಯರು ‘ಮೆಹರಮ್’ (ಪುರುಷ ಜೊತೆಗಾರ) ಇಲ್ಲದೆ ಹಜ್‌ಗೆ ತೆರಳುತ್ತಿದ್ದಾರೆ. ಸೌದಿ ಅರೇಬಿಯದಲ್ಲಿ ಅವರಿಗೆ ತಂಗಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಮತ್ತು ಅವರ ಸಹಾಯಕ್ಕಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
1,300ಕ್ಕೂ ಅಧಿಕ ಮಹಿಳೆಯರು ಮೆಹರಮ್ ಇಲ್ಲದೆ ಹಜ್‌ಗೆ ಪ್ರಯಾಣಿಸಲು ಅರ್ಜಿ ಹಾಕಿದ್ದಾರೆ. ಅವರೆಲ್ಲರನ್ನೂ ಲಾಟರಿ ವ್ಯವಸ್ಥೆಯಿಂದ ಹೊರಗಿಡಲಾಗುವುದು ಮತ್ತು ಹಜ್‌ಗೆ ತೆರಳಲು ಅನುಮತಿ ನೀಡಲಾಗುವುದು ಎಂದು ನಖ್ವಿ ತಿಳಿಸಿದ್ದಾರೆ.
ಭಾರತದ ಹೊಸ ಹಜ್ ನಿಯಮದಂತೆ 45 ವರ್ಷಕ್ಕಿಂತ ಮೇಲ್ಪಟ್ಟ, ಪುರುಷ ಜೊತೆಗಾರರಿಲ್ಲದ ಮಹಿಳೆಯರು ನಾಲ್ಕು ಅಥವಾ ಅಧಿಕ ಮಂದಿಯ ಗುಂಪಿನ ಜೊತೆ ಹಜ್‌ಗೆ ತೆರಳಲು ಅನುಮತಿ ನೀಡಲಾಗಿದೆ.