ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ: ಹೊಸ ನಿಯಮ ರೂಪಿಸಲು ಕೇಂದ್ರದಿಂದ ಸಮಿತಿ

ಹೊಸದಿಲ್ಲಿ, ಜ. 7: ಸಿನೆಮಾ ಮಂದಿರದಲ್ಲಿ ಚಲನಚಿತ್ರ ಪ್ರದರ್ಶಿಸುವ ಮುನ್ನ ರಾಷ್ಟ್ರಗೀತೆ ನುಡಿಸಬೇಕು ಹಾಗೂ ಎಲ್ಲರೂ ಹಾಜರಿದ್ದು ರಾಷ್ಟ್ರಗೀತೆ ಮುಗಿಯುವ ವರೆಗೆ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ 2016 ನವೆಂಬರ್ 30ರಂದು ದೇಶಾದ್ಯಂತದ ಚಿತ್ರಮಂದಿರಗಳಿಗೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹೊಸ ನಿಯಮಗಳನ್ನು ರೂಪಿಸಲು ಸಮಿತಿಯೊಂದನ್ನು ರೂಪಿಸಿದೆ.
ಚಲನಚಿತ್ರ ಪ್ರದರ್ಶಿಸುವ ಮುನ್ನ ರಾಷ್ಟ್ರಗೀತೆ ನುಡಿಸಬೇಕು. ಈ ಸಂದರ್ಭ ಎಲ್ಲರೂ ಹಾಜರಾಗಿ ರಾಷ್ಟ್ರಗೀತೆ ಮುಗಿಯುವ ವರೆಗೆ ಎದ್ದುನಿಂತು ಗೌರವ ಸಲ್ಲಿಸಬೇಕು ಎಂದು 2016 ನವೆಂಬರ್ 30ರಂದು ಸರ್ವೋಚ್ಚ ನ್ಯಾಯಾಲಯ ದೇಶಾದ್ಯಂತದ ಎಲ್ಲ ಸಿನೆಮಾ ಮಂದಿರಗಳಿಗೆ ನಿರ್ದೇಶಿಸಿತ್ತು. ಓರ್ವ ದೇಶಭಕ್ತಿ ಹಾಗೂ ರಾಷ್ಟ್ರೀಯತೆಗೆ ಬದ್ಧನಾಗಿರುವಂತೆ ಭಾವನೆಗಳನ್ನು ಈ ಅಭ್ಯಾಸ ರೂಪಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.
ಆದಾಗ್ಯೂ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನೊಳಗೊಂಡ ಮೂವರು ಸದಸ್ಯ ಪೀಠ ಅಕ್ಟೋಬರ್‌ನಲ್ಲಿ ನೀಡಿದ ಆದೇಶವನ್ನು ಮಾರ್ಪಾಡು ಮಾಡಲು ಸೂಚನೆ ನೀಡಿತ್ತು.
ಜನರು ದೇಶಭಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡವರಂತೆ ಯಾಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ನ್ಯಾಯಾಲಯ, ಜನರು ಚಿತ್ರಮಂದಿರಗಳಿಗೆ ಹೋಗುವುದು ಮನರಂಜನೆಗಾಗಿ. ಸಮಾಜಕ್ಕೆ ಮನರಂಜನೆಯ ಅಗತ್ಯತೆ ಇದೆ ಎಂದಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಗೀತೆ ನುಡಿಸುವುದನ್ನು ನಿಯಂತ್ರಿಸುವ ಬಗ್ಗೆ ಗಮನ ಹರಿಸುವಂತೆ ಹಾಗೂ ಅಗತ್ಯದ ನಿಯಮಗಳನ್ನು ತರುವಂತೆ ಕೂಡ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತ್ತು.