32,000 ಕೋಟಿ ರೂ.ಗಳ ಯುದ್ಧನೌಕೆ ಯೋಜನೆ ಕೈಬಿಟ್ಟ ಕೇಂದ್ರ
‘ಮೇಕ್ ಇನ್ ಇಂಡಿಯಾ’ಗೆ ಹಿನ್ನಡೆ

ಹೊಸದಿಲ್ಲಿ, ಜ.8: 12 ಸುಧಾರಿತ ಸಿಡಿಗುಂಡು ನಿವಾರಕ (ಮೈನ್‌ಸ್ವೀಪಿಂಗ್) ಯುದ್ಧನೌಕೆಗಳನ್ನು ಅಭಿವೃದ್ಧಿಪಡಿಸುವ 32,000 ಕೋಟಿ ರೂ.ಗಳ ಯೋಜನೆಯನ್ನು ಕೇಂದ್ರ ಸರಕಾರ ಕೈಬಿಟ್ಟಿದ್ದು, ಇದರಿಂದ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ದಕ್ಷಿಣ ಕೊರಿಯಾದ ಜೊತೆಗಾರಿಕೆಯಲ್ಲಿ ಗೋವಾದ ಹಡಗು ನಿರ್ಮಾಣ ಕೇಂದ್ರದಲ್ಲಿ ಈ ಸುಧಾರಿತ ಯುದ್ಧನೌಕೆಗಳ ಅಭಿವೃದ್ಧಿಗೆ ರೂಪಿಸಲಾಗಿದ್ದ ಯೋಜನೆಯನ್ನು ಕೈಬಿಡಲಾಗಿದೆ. ಈ ಯೋಜನೆಯು ಭಾರತೀಯ ನೌಕಾಪಡೆಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತಿತ್ತು ಎಂದು ಪತ್ರಿಕೆ ವರದಿ ಮಾಡಿದೆ. ಈ ಮೈನ್‌ಸ್ವೀಪರ್ ಯುದ್ಧನೌಕೆಗಳು ಯುದ್ಧದ ಸಂದರ್ಭದಲ್ಲಿ ಶತ್ರುರಾಷ್ಟ್ರದ ಜಲ ಸಿಡಿಗುಂಡುಗಳನ್ನು ನಿಷ್ಕ್ರಿಯಗೊಳಿಸಲು ಸಹಕಾರಿಯಾಗಿವೆ. ಇವುಗಳು ನೀರಿನ ಅಡಿಯಲ್ಲಿ ಶತ್ರುರಾಷ್ಟ್ರಗಳು ಅಡಗಿಸಿರುವ ಸಿಡಿಗುಂಡುಗಳನ್ನು ಪತ್ತೆ ಮಾಡುತ್ತವೆ ಎಂದು ಪತ್ರಿಕೆಯ ವರದಿ ತಿಳಿಸಿದೆ.
ಭಾರತದ ಪೂರ್ವ ಮತ್ತು ಪಶ್ಚಿಮ ಭಾಗದ ರಕ್ಷಣೆರಹಿತ ಕರಾವಳಿಯ ಮೇಲೆ ನಿಗಾಯಿಡಲು ನೌಕಾಪಡೆಗೆ ಕನಿಷ್ಟ 24 ಸಿಡಿಗುಂಡು ನಿವಾರಕ ಯುದ್ಧನೌಕೆಗಳ ಅಗತ್ಯವಿದೆ. ಸದ್ಯ ನೌಕಾಪಡೆಯು ಮೂರು ದಶಕಗಳಷ್ಟು ಹಳೆಯ ಕೇವಲ ನಾಲ್ಕು ಮೈನ್‌ಸ್ವೀಪರ್ ಯುದ್ಧಹಡಗುಗಳನ್ನು ಹೊಂದಿದೆ ಎಂದು ಪತ್ರಿಕೆ ವರದಿ ಮಾಡಿದೆ.