ಸರಕಾರಿ ವೆಬ್‌ಸೈಟ್ ಸೇರಿ ಗುಜರಾತ್‌ನ 3 ಜಾಲತಾಣಗಳಿಂದ ಆಧಾರ್ ವಿವರ ಬಹಿರಂಗ

ಅಹ್ಮದಾಬಾದ್,ಜ.8: ಸರಕಾರದ ವೆಬ್‌ಸೈಟ್ ಸೇರಿದಂತೆ ಗುಜರಾತ್‌ನ ಮೂರು ಸರಕಾರಿ ಜಾಲತಾಣಗಳು ಫಲಾನುಭವಿಗಳ ಆಧಾರ್ ಸಂಖ್ಯೆಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಮೂಲಕ ಆಧಾರ್ ಕಾಯ್ದೆಯನ್ನು ಉಲ್ಲಂಘಿಸಿರುವುದನ್ನು ವಿದ್ಯುನ್ಯಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇತ್ತೀಚಿಗೆ ಬೆಳಕಿಗೆ ತಂದಿದೆ.
ಈ ಮೂರು ಜಾಲತಾಣಗಳು ಗುಜರಾತ್ ಸರಕಾರ, ರಾಜ್ಯದ ಅಭಿವೃದ್ಧಿಶೀಲ ಜಾತಿ ಅಭಿವೃದ್ಧಿ ನಿರ್ದೇಶಕರ ಕಚೇರಿ ಮತ್ತು ಗುಜರಾತ್ ವಿವಿಗೆ ಸೇರಿದ್ದಾಗಿವೆ. ಇವುಗಳಲ್ಲಿ ಫಲಾನುಭವಿಗಳ ಹೆಸರು, ವಿಳಾಸ ಮತ್ತು ಆಧಾರ್ ವಿವರಗಳನ್ನು ಬಹಿರಂಗವಾಗಿ ಪ್ರದರ್ಶಿಸಲಾಗಿದೆ.
ಸರಕಾರಿ ಮತ್ತು ಸಾರ್ವಜನಿಕ ಜಾಲತಾಣಗಳಿಂದ ಆಧಾರ್ ಮಾಹಿತಿಗಳ ಸೋರಿಕೆ ಪ್ರಸ್ತುತ ರಾಷ್ಟ್ರಾದ್ಯಂತ ಬಿಸಿಚರ್ಚೆಯ ವಿಷಯವಾಗಿದ್ದು, ಸಂಸತ್ತಿನಲ್ಲಿಯೂ ಪ್ರತಿಧ್ವನಿಸಿದೆ. ತಪ್ಪಿತಸ್ಥ ಜಾಲತಾಣಗಳಿಂದ ಆಧಾರ್ ಸಂಖ್ಯೆಗಳ ಬಹಿರಂಗ ಕುರಿತು ಮಾಹಿತಿಯನ್ನು ಸಂಸತ್ತಿನಲ್ಲಿ ಡಿ.29ರಂದು ಮಂಡಿಸಲಾಗಿತ್ತು.
ದೇಶಾದ್ಯಂತ ಸುಮಾರು 200 ಜಾಲತಾಣಗಳು ವ್ಯಕ್ತಿಗಳ ಆಧಾರ್ ವಿವರಗಳನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿದ್ದು, ಅವುಗಳನ್ನು ತೆಗೆದು ಹಾಕುವಂತೆ ಅವುಗಳಿಗೆ ಸೂಚಿಸಲಾಗಿದೆ.
ಆಧಾರ್ ಮಾಹಿತಿಗಳು ಬಹಿರಂಗಗೊಂಡಿರುವುದು ತನಗೆ ತಿಳಿದಿಲ್ಲ ಎಂದು ಗುಜರಾತ್‌ನ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. ಅಭಿವೃದ್ಧಿಶೀಲ ಜಾತಿ ಅಭಿವೃದ್ಧಿ ಸಂಸ್ಥೆಯ ಹೊಣೆಯನ್ನು ಹೊತ್ತಿರುವ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಸಚಿವ ಈಶ್ವರ ಪರಮಾರ ಮತ್ತು ಗುಜರಾತ್ ವಿವಿಯ ಕುಲಪತಿ ಹಿಮಾಂಶು ಪಾಂಡ್ಯ ಅವರೂ ಇದೇ ಪ್ರತಿಕ್ರಿಯೆ ನೀಡಿದ್ದಾರೆ.
ಆಧಾರ್ ಕಾಯ್ದೆ ಉಲ್ಲಂಘನೆಗೆ ಪ್ರತಿಕ್ರಿಯಿಸಿರುವ ಗುಜರಾತ್ ಉಚ್ಚ ನ್ಯಾಯಾಲಯದ ವಕೀಲ ಆನಂದ್ ಯಾಗ್ನಿಕ್ ಅವರು, ಖಾಸಗಿತನವು ಮೂಲಭೂತ ಹಕ್ಕು ಆಗಿದೆ ಮತ್ತು ಈ ಮಾಹಿತಿಯ ಸಾರ್ವಜನಿಕ ಪ್ರದರ್ಶನವು ಖಾಸಗಿತನದ ಉಲ್ಲಂಘನೆಯಾಗಿದೆ ಎಂದಿದ್ದಾರೆ.







