ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಜೋಡಣೆ ಅಂತಿಮ ದಿನಾಂಕ ವಿಸ್ತರಣೆ

ಹೊಸದಿಲ್ಲಿ, ಜ.8: ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಅಂತಿಮ ದಿನಾಂಕವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಸರಕಾರ ತಿಳಿಸಿದೆ.
ಈಗಾಗಲೇ ಸಾಮಾಜಿಕ ಸೌಲಭ್ಯ ಯೋಜನೆಗಳು, ಬ್ಯಾಂಕ್ ಖಾತೆಗಳು ಹಾಗೂ ಮೊಬೈಲ್ ಸಂಖ್ಯೆಗಳನ್ನು ಆಧಾರ್‌ಗೆ ಜೋಡಿಸುವ ಅಂತಿಮ ದಿನಾಂಕವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದ್ದು ಇದೀಗ ಸಣ್ಣ ಉಳಿತಾಯ ಯೋಜನೆಗೂ ಈ ಗಡುವನ್ನು ನಿಗದಿಗೊಳಿಸಲಾಗಿದೆ.
ಅಂಚೆಕಚೇರಿ ಠೇವಣಿ, ಪಿಪಿಎಫ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ, ಕಿಸಾನ್ ವಿಕಾಸ್ ಪತ್ರ ಮುಂತಾದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ವಿನಿಯೋಗಿಸುವವರು 12 ಅಂಕೆಯ ಆಧಾರ್ ಸಂಖ್ಯೆಯೊಂದಿಗೆ 2017ರ ಡಿ.31ರೊಳಗೆ ಜೋಡಿಸಬೇಕು ಎಂದು ಸೂಚಿಸಿತ್ತು. ಇದೀಗ ಅಂತಿಮ ದಿನಾಂಕವನ್ನು ಮುಂದೂಡಲಾಗಿದ್ದು ಬಡ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಗ್ಯಾಸ್ , ಸೀಮೆಎಣ್ಣೆ ಹಾಗೂ ರಸಗೊಬ್ಬರ ಸಬ್ಸಿಡಿ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಒಟ್ಟು 135 ಯೋಜನೆಗಳಿಗೆ ಇದು ಅನ್ವಯಿಸುತ್ತದೆ.
Next Story