ನವಕರ್ನಾಟಕದ ನಿರ್ಮಾಣ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ
ಬೈಂದೂರು ಕ್ಷೇತ್ರದಲ್ಲಿ 490.97 ಕೋಟಿ ರೂ. ಮೊತ್ತದ ಕಾಮಗಾರಿಗೆ ಚಾಲನೆ

ಬೈಂದೂರು, ಜ. 8: ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ‘ಮಿಷನ್-2025’ ಮುನ್ನೋಟದ ತಯಾರಿ ನಡೆದಿದ್ದು, ಇದರೊಂದಿಗೆ ಸಂಸದ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆಯು ನಡೆದಿದೆ. ಈ ಎರಡನ್ನು ಸೇರಿಸಿ ನವಕರ್ನಾಟಕ ನಿರ್ಮಾಣಕ್ಕೆ ಬೇಕಾದ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಈ ಮೂಲಕ ಕರ್ನಾಟಕವನ್ನು ದೇಶದ ನಂ.1 ರಾಜ್ಯವನ್ನಾಗಿ ಮಾಡಲು ಕಟಿಬದ್ಧರಾಗಿದ್ದೇವೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಜಿಪಂನ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಒಟ್ಟು 490.97 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.
ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಈ ಅವಧಿಯ ಐದನೇ ಹಾಗೂ ಕೊನೆಯ ಬಜೆಟ್‌ನ್ನು ಫೆಬ್ರವರಿ ತಿಂಗಳಲ್ಲಿ ಮಂಡಿಸಲಿದ್ದು, ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಯಾವುದೇ ಜನಪರ ಕೆಲಸದ ಬಗ್ಗೆ ಶಾಸಕರು ಮಾಹಿತಿ ನೀಡಿದರೆ ಅದನ್ನು ಬಜೆಟ್‌ನಲ್ಲಿ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದವರು ಭರವಸೆ ನೀಡಿದರು.
ಖಾರ್ವಿ ಸೇರಿದಂತೆ ಮೀನುಗಾರ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಮೂರನೇ ಹಾಗೂ ಕೊನೆಯ ಬಾರಿ ಪ್ರಸ್ತಾಪ ಕಳುಹಿಸುವಂತೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾಡಿಕೊಂಡ ಮನವಿಗೆ ಉತ್ತರಿಸಿದ ಸಿದ್ದರಾಮಯ್ಯ, ಖಾರ್ವಿ, ಮೊಗವೀರರು, ಬೆಸ್ತರು, ಗಂಗಮತಸ್ಥರು ಸೇರಿದಂತೆ ಮೀನುಗಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಶಿಪಾರಸ್ಸು ಮಾಡಿ ರಾಜ್ಯ ಸರಕಾರ ಎರಡು ಬಾರಿ ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಿತ್ತು. ಆದರೆ ಕೇಂದ್ರ ಇದನ್ನು ತಿರಸ್ಕರಿಸಿದೆ. ಈ ಬಗ್ಗೆ ಪ್ರಯತ್ನ ಪಡಬಹುದಾದ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸಂಸದರು ಮೌನವಹಿಸಿದ್ದಾರೆ. ನಾವು ಇದಕ್ಕಾಗಿ ಮತ್ತೊಮ್ಮೆ ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಿ ಪ್ರಯತ್ನಿಸುತ್ತೇವೆ. ನಮಗೆ ಬದ್ಧತೆ ಇದೆ ಎಂದರು.
ಜನರಿಗೆ, ಸಮಾಜಕ್ಕೆ ಪ್ರಯೋಜನವಾಗುವ ಯಾವುದೇ ಮನವಿಯನ್ನು ನಾವು ಪರಿಗಣಿಸುತ್ತೇವೆ. ಅಭಿವೃದ್ಧಿ ಕಾರ್ಯದಲ್ಲಿ ಮೀನಮೇಷ ಎಣಿಸುವ ಪ್ರಶ್ನೆಯೇ ಇಲ್ಲ. ನುಡಿದಂತೆ ನಡೆಯುವ ಸರಕಾರ ದೇಶದಲ್ಲಿ ಯಾವುದಾದರೂ ಇದ್ದರೆ ಅದು ರಾಜ್ಯದ ಕಾಂಗ್ರೆಸ್ ಸರಕಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಎಂದರು.
ತಾರತಮ್ಯ ಇಲ್ಲದ ಅಭಿವೃದ್ಧಿ: ನಮ್ಮ ಸರಕಾರ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಯಾವುದೇ ತಾರತಮ್ಯ ಇಲ್ಲದೇ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದೇವೆ. ಕ್ರಿಯಾಶೀಲ ಶಾಸಕರು ಇರುವಲ್ಲಿ ಇದರ ಪ್ರಮಾಣ ಸ್ವಲ್ಪ ಜಾಸ್ತಿಯಿರಬಹುದು. ನಮ್ಮ ಉದ್ದೇಶ ರಾಜ್ಯದ ಎಲ್ಲಾ 224 ಕ್ಷೇತ್ರಗಳ ಅಭಿವೃದ್ಧಿ. ಆಗ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದೆ ಎಂಬುದರಲ್ಲಿ ನಾವು ನಂಬಿಕೆ ಇಟ್ಟುಕೊಂಡು ಕೆಲಸ ಮಾಡುತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯ ಚಾಳಿ: ತಾನು ಸತತ ಪ್ರಯತ್ನಗಳಿಂದ ಕ್ಷೇತ್ರಕ್ಕೆ ತಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಸಾಧನೆಯ ಪಟ್ಟಿಗೆ ಸೇರಿಸಿಕೊಂಡಿರುವ ಬಿಜೆಪಿ ಸಂಸದರ ಕ್ರಮದ ಕುರಿತು ದೂರಿದ ಶಾಸಕ ಪೂಜಾರಿಯವರನ್ನು ಸಮಾಧಾನ ಪಡಿಸಿದ ಸಿದ್ದರಾಮಯ್ಯ, ಬೇರೆಯವರ ಸಾಧನೆಗೆ ಬ್ಯಾನರ್ ಹಾಕಿ ಕ್ರೆಡಿಟ್ ತೆಗೆದುಕೊಳ್ಳುವುದು ಬಿಜೆಪಿಯವರ ಚಾಳಿ. ಆದರೆ ಯಾರು ಕೆಲಸ ಮಾಡುವವರು, ಯಾರು ಬರೇ ಬೊಗಳೆ ಬಿಡುವವರು ಎಂಬುದು ಕ್ಷೇತ್ರದ ಮತದಾರರಿಗೆ ಚೆನ್ನಾಗಿ ಗೊತ್ತಿದೆ ಎಂದರು.
ಬಿಜೆಪಿಯವರು ಕೆಲಸ ಮಾಡಿದ್ದು ಕಡಿಮೆ, ಆದರೆ ಪ್ರಚಾರ ಜಾಸ್ತಿ. ಬೇಕಿದ್ದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಿ. ಅವರು ಕೆಲಸ ಏನೇನೂ ಮಾಡಿಲ್ಲ. ಆದರೆ ಭರ್ಜರಿ ಪ್ರಚಾರ ತೆಗೆದುಕೊಳ್ಳುತಿದ್ದಾರೆ. ಮೋದಿ, ಚುನಾವಣೆಗೆ ಪೂರ್ವ ನೀಡಿದ ಯಾವುದಾದರೂ ಭರವಸೆ ಈಡೇರಿಸಿದ್ದಾರಾ ಎಂದು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಮುಖ್ಯಮಂತ್ರಿ ಪ್ರಶ್ನಿಸಿದರು.
ಚುನಾವಣಾ ಪೂರ್ವ ‘ಅಚ್ಛೇ ದಿನ್’ ತರುತ್ತೇನೆ ಎಂದರು. ಯಾರಿಗಾದರೂ ಅಚ್ಛೇ ದಿನ್ ಬಂತಾ ಎಂದು ಪ್ರಶ್ನಿಸಿದ ಅವರು, ರೈತರು, ದಲಿತರು, ಹಿಂದುಳಿದವರು, ಮಹಿಳೆಯರಿಗೆ ಒಳ್ಳೆಯ ದಿನಗಳು ಬಂದಿಲ್ಲ. ಅಚ್ಛೇದಿನ್ ಬಂದಿದ್ದು, ಕೇವಲ ಅದಾನಿ, ಅಂಬಾನಿ, ಬಾಬಾ ರಾಮದೇವ್ ಮುಂತಾದವರಿಗೆ. ಬಂಡವಾಳ ಶಾಹಿಗಳಿಗೆ ಅನುಕೂಲಕರ ನಿರ್ಧಾರ ಮಾತ್ರ ಅವರಿಂದ ಬಂದಿದೆ. ಇವರಿಂದ ಬಡವರಿಗೆ ಯಾವುದೇ ಪ್ರಯೋಜನ ಇಲ್ಲ ಎಂದರು.
15 ಲಕ್ಷ ಬಿಡಿ..15 ಪೈಸೆ ಸಹ ಬಂದಿಲ್ಲ: ಚುನಾವಣಾ ಪೂರ್ವ ವಿದೇಶದ ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಬ್ಯಾಂಕ್ ಅಕೌಂಟ್‌ಗೆ ಹಾಕುತ್ತೇನೆ ಎಂದವರು 15 ಲಕ್ಷ ಬಿಡಿ, 15 ಪೈಸೆನಾದ್ರೂ ಹಾಕಿದ್ದಾರೇನ್ರಿ ಎಂದು ಜೋರಾಗಿ ಪ್ರಶ್ನಿಸಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದರು, 2 ಲಕ್ಷ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.
ರೈತರ ಸಾಲ ಮನ್ನಾ ಮಾಡಲು ಮೋದಿಗೆ ಸಾಧ್ಯವಾಗಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ನಿಯೋಗವನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋದರೆ, ನಮ್ಮ ರಾಜ್ಯ ಬಿಜೆಪಿ ನಾಯಕರು ಮೋದಿ ಎದುರು ತುಟಿ ಪಿಟಕ್ ಎನ್ನಲಿಲ್ಲ. ಇವರದ್ದು ಏನಿದ್ದರೂ ಎಲ್ಲಾ ಘೋಷಣೆಯಲ್ಲಿ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದರು.
ವೇದಿಕೆಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಬ್ಲೋಸಂ ಫೆರ್ನಾಂಡೀಸ್, ಸಚಿವ ಪ್ರಮೋದ್ ಮಧ್ವರಾಜ್, ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಎಂ.ಎ.ಗಫೂರ್, ಜಿ.ಎ. ಬಾವಾ, ನರಸಿಂಹಮೂರ್ತಿ, ಜನಾರ್ದನ ತೋನ್ಸೆ, ಎಂ.ಎನ್.ರಾಜೇಂದ್ರ ಕುಮಾರ್, ರಾಕೇಶ್ ಮಲ್ಲಿ, ಸಂಜೀವ ಶೆಟ್ಟಿ, ರಾಜೂ ಪೂಜಾರಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಒ ಶಿವಾ ನಂದ ಕಾಪಶಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆ ನವ ಉಡುಪಿ ನಿರ್ಮಾಣ ಹೊತ್ತಿಗೆಯನ್ನು ಮುಖ್ಯಮಂತ್ರಿ ಅನಾವರಣಗೊಳಿಸಿದರು. ವಿವಿಧ ಯೋಜನೆಗಳ ಫಲಾನುಭವಿ ಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ವಿವಿಧ ಸಂಘಟನೆಗಳು ಅವರನ್ನು ಅಭಿನಂದಿಸಿದವು. ಖಾರ್ವಿ ಹರಿಕಾಂತ ಮಹಾಜನ ಸಂಘಕ್ಕೆ ಸರಕಾರದ ವತಿಯಿಂದ 25 ಲಕ್ಷ ರೂ.ಗಳ ಚೆಕ್ ವಿತರಿಸಿದ ಮುಖ್ಯಮಂತ್ರಿಯವರಿಗೆ, ಸಂಘ ‘ಬೆಳ್ಳಿಯ ಮೀನು’ ಸ್ಮರಣಿಕೆ ನೀಡಿ ಗೌರವಿಸಿತು.
ಬೈಂದೂರು ಶಾಸಕ ಗೋಪಾಲ ಪೂಜಾರಿ ಸ್ವಾಗತಿಸಿದರೆ, ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಯಡಿಯೂರಪ್ಪರಿಗೆ ಎರಡು ನಾಲಗೆ
ಸಿಎಂ ಆಗಿ ಹಸಿರು ಶಾಲು ಹಾಕಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಕೆಲವೇ ದಿನಗಳಲ್ಲಿ ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿಸಿ ಇಬ್ಬರನ್ನು ಕೊಂದರು. ಸಾಲ ಮನ್ನಾ ಮಾಡಿ ಎಂದು ಬೇಡಿಕೆ ಇಟ್ಟ ರೈತರಿಗೆ ನನ್ನ ಬಳಿ ನೋಟು ಪ್ರಿಂಟಿಂಗ್ ಮೇಷಿನ್ ಇಲ್ಲ ಎಂದು ಅಬ್ಬರಿಸಿದರು. ಈಗ ಹೋದಲ್ಲೆಲ್ಲಾ ರೈತರ ಸಾಲ ಮನ್ನಾ ಮಾಡಿ ಎಂದು ವೀರಾವೇಶದಿಂದ ಮಾತನಾಡುತಿದ್ದಾರೆ. ರೈತ ಸಾಲ ಮನ್ನಾಕ್ಕಾಗಿ ನಿಯೋಗ ಹೋದಾಗ ಮೋದಿ ಎದುರು ತುಟಿ ಪಿಟಕ್ ಎನ್ನಲಿಲ್ಲ. ಹೀಗೆ ಎರಡು ರೀತಿಯಲ್ಲಿ ಮಾತನಾಡುವ ಯಡಿಯೂರಪ್ಪರಿಗೆ ಎರಡು ನಾಲಗೆ ಇದೆ ಎಂದು ಸಿದ್ದರಾಮಯ್ಯ ಕುಟುಕಿದರು.







