ವಿದ್ಯಾರ್ಥಿಯನ್ನು ಉಚ್ಛಾಟಿಸಿದ ಆಲಿಗಡ ಮುಸ್ಲಿಮ್ ವಿವಿ
ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಗೊಂಡ ಶಂಕೆ

ಹೊಸದಿಲ್ಲಿ, ಜ.8: ಉತ್ತರ ಕಾಶ್ಮೀರದ ಕುಪ್ವಾರ ಮೂಲದ ಸಂಶೋಧನಾ ವಿದ್ಯಾರ್ಥಿಯೊಬ್ಬ ಭಯೋತ್ಪಾದಕ ಸಂಘಟನೆಗೆ ಸೇರಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆತನನ್ನು ಆಲಿಗಡ ಮುಸ್ಲಿಮ್ ವಿವಿ(ಅಮು) ಉಚ್ಛಾಟಿಸಿದೆ.
ಭೂವಿಜ್ಞಾನ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಬಶೀರ್ ವಾನಿ, ಕೈಯಲ್ಲಿ ಎಕೆ-47 ರೈಫಲ್ ಹಿಡಿದುಕೊಂಡು ನಿಂತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಬಶೀರ್ ಹಿಝ್‌ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿರುವ ಶಂಕೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಅಮು’ ವಿವಿಯಲ್ಲಿ ಚಳಿಗಾಲದ ರಜೆ ಜನವರಿ 6ರಿಂದ ಆರಂಭವಾಗಿದ್ದು, ಬಶೀರ್ ಜನವರಿ 2ರಂದೇ ವಿವಿಯಿಂದ ತೆರಳಿದ್ದಾನೆ ಎಂದು ತಿಳಿದುಬಂದಿದೆ. ಈತ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಶಂಕೆಯಿದೆ ಎಂದು ಆಲಿಗಡ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ ಬಳಿಕ ವಿವಿಯಲ್ಲಿ ಆತ ವಾಸ್ತವ್ಯವಿದ್ದ ಹಾಸ್ಟೆಲ್‌ನ ಕೋಣೆಗೆ ವಿವಿಯ ಹಿರಿಯ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿವಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.
ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ವಿವಿ ತನಿಖಾ ಸಮಿತಿಯೊಂದನ್ನು ರಚಿಸಿದೆ ಎಂದು ವಿವಿಯ ನಿಯಮಪಾಲಕ ಪ್ರೊ. ಮೊಹ್ಸಿನ್ ಖಾನ್ ತಿಳಿಸಿದ್ದಾರೆ. ಹಾಸ್ಟೆಲ್ ಕೋಣೆಗಳಿಗೆ ರಾತ್ರಿ ವೇಳೆ ದಿಢೀರ್ ಭೇಟಿ ನೀಡಿ, ಉಚ್ಛಾಟಿತ ವಿದ್ಯಾರ್ಥಿಗಳೂ ಸೇರಿದಂತೆ ಹೊರಗಿನ ವಿದ್ಯಾರ್ಥಿಗಳು ಹಾಸ್ಟೆಲ್ ಕೋಣೆಯಲ್ಲಿ ಉಳಿದುಕೊಳ್ಳದಂತೆ ಕ್ರಮ ಕೈಗೊಳ್ಳಲಾಗುವುದು . ಅಲ್ಲದೆ ಸಿಸಿಟಿವಿಗಳ ಫೂಟೇಜ್‌ಗಳನ್ನು ವಾರಕ್ಕೊಮ್ಮೆ ಪರಿಶೀಲಿಸಲಾಗುವುದು ಎಂದವರು ತಿಳಿಸಿದ್ದಾರೆ.
ವಿವಿಯು ಯಾವುದೇ ರೀತಿಯ ರಾಷ್ಟ್ರವಿರೋಧಿ ಕೃತ್ಯಗಳ ವಿಷಯದಲ್ಲಿ ‘ಶೂನ್ಯ ಸಹಿಷ್ಣುತೆ’ಯನ್ನು ಹೊಂದಿದೆ ಎಂದು ವಿವಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಮಾಧ್ಯಮ ಸಲಹೆಗಾರ ಪ್ರೊ ಶಾಫಿ ಕಿದ್ವಾಯ್ ತಿಳಿಸಿದ್ದಾರೆ.
ಆದರೆ ಬಶೀರ್ ವಾನಿಗೆ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿರುವ ಬಗ್ಗೆ ಈಗಾಗಲೇ ಖಚಿತವಾಗಿ ಹೇಳಲಾಗದು ಎಂದು ಜಮ್ಮು ಕಾಶ್ಮೀರದ ಪೊಲೀಸರು ಹೇಳಿದ್ದಾರೆ. ದಿಲ್ಲಿಯಿಂದ ತೆರಳಿದ ಬಳಿಕ ಬಶೀರ್ ಎಲ್ಲಿದ್ದಾನೆ ಎಂಬ ಮಾಹಿತಿ ಇದುವರೆಗೆ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.