ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ, ತಾಂತ್ರಿಕ ಪರಿಚಯಕ್ಕಾಗಿ ಉಚಿತ ಲಾಪ್‌ಟಾಪ್: ಸಚಿವ ಆರ್.ವಿ. ದೇಶಪಾಂಡೆ

ಭಟ್ಕಳ, ಜ. 8: ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹಾಗೂ ತಾಂತ್ರಿಕ ಪರಿಚಯ ಮಾಡಿಕೊಡುವ ಸಲುವಾಗಿ ಸರಕಾರ ಉಚಿತವಾಗಿ ಲಾಪ್‌ಟಾಪ್ ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಹೇಳಿದರು.
ಅವರು ಇಲ್ಲಿನ ಕಮಲಾವತಿ ರಾಮನಾಥ ಸಭಾಗ್ರಹದಲ್ಲಿ ಸರಕಾರಿ ಕಾಲೇಜುಗಳ ಪ್ರಥಮ ವರ್ಷದ ಪದವಿ, ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲಾಪ್‌ಟಾಪ್ ವಿತರಣೆ ಮಾಡಿ ಮಾತನಾಡುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆಯ 523 ವಿದ್ಯಾರ್ಥಿಗಳಿಗೆ 16-17ನೇ ಶೈಕ್ಷಣಿಕ ವರ್ಷದಲ್ಲಿ ಲಾಪ್‌ಟಾಪ್ ನೀಡಲಾಗಿದೆ. ಈ ಬಾರಿ ಪ್ರಥಮ ವರ್ಷದಲ್ಲಿ ಅಭ್ಯಾಸ ಮಾಡುವ ಸರಕಾರಿ ಕಾಲೇಜಿನ ಹಾಗೂ ಪಾಲಿಟೆಕ್ನಿಕ್‌ನ ಎಲ್ಲಾ 1.5 ಲಕ್ಷ ವಿದ್ಯಾರ್ಥಿಗಳಿಗೂ ಕೂಡಾ ಲಾಪ್ ಟಾಪ್ ವಿತರಿಸಲಾಗುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಸುಧಾರಿಸಲು ಸರಕಾರ ಹಲವಾರು ಕ್ರಮ ಕೈಗೊಂಡಿದೆ ಎಂದರು.
ಕಲಿಕೆಗೆ ಅನುಕೂಲ ಮಾಡಿಕೊಡುವಲ್ಲಿ ಪಾಲಕರ ಪಾತ್ರ ಕೂಡಾ ಮುಖ್ಯವಾಗಿದ್ದು, ಶಿಕ್ಷಣದ ಕುರಿತು ಹೆಚ್ಚು ಕಾಳಜಿ ವಹಿಸಬೇಕು ಎಂದು ಪಾಲಕರಿಗೆ ಕಿವಿ ಮಾತು ಹೇಳಿದ ಅವರು ಶಿಕ್ಷಕರು ವಿದ್ಯಾರ್ಥಿಗಳ ತಾಯಿಯಿದ್ದಂತೆ, ಎಲ್ಲ ಮಕ್ಕಳನ್ನೂ ಕೂಡಾ ಸಮಾನವಾಗಿ ಪ್ರೋತ್ಸಾಹಿಸುತ್ತಾ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಕರೆ ನೀಡಿದರು.
ಮಗು ಜೀವನದಲ್ಲಿ ಯಶಸ್ವೀಯಾಗಲು ವಿದ್ಯೆಯೊಂದಿಗೆ ಸಾಮಾನ್ಯ ಜ್ಞಾನದ ಅವಶ್ಯಕತೆ ಕೂಡಾ ಇದ್ದು ಶಿಕ್ಷಕರು ಪ್ರತಿ ಮಗುವಿಗೂ ಕೂಡಾ ಸಾಮಾನ್ಯ ಜ್ಞಾನ ವೃದ್ಧಿಸುವ ಕೆಲಸ ಮಾಡುವ ಮೂಲಕ ಇಂದಿನ ವಿದ್ಯಾರ್ಥಿಗಳನ್ನು ವಿಶ್ವ ಮಟ್ಟದಲ್ಲಿ ಸ್ಪರ್ಧೆಯೊಡ್ಡಲು ಅಣಿಗೊಳಿಸಬೇಕು ಎಂದರು.
ಸಿದ್ದರಾಮಯ್ಯ ನೇತೃತ್ವದ ತಮ್ಮ ಸರಕಾರ ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯ ನೀಡುವಲ್ಲಿ ಬದ್ಧವಾಗಿದ್ದು ಹಲವಾರು ಕ್ರಮ ಕೈಗೊಂಡಿದೆ. ಉದ್ಯೋಗ ಸೃಷ್ಟಿಸುವ ಸಲುವಾಗಿ ಈ ವರ್ಷ 5 ಲಕ್ಷ ಜನತೆಗೆ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ ಎಂದರು. ರಾಜ್ಯ ಸರಕಾರ ಅಭಿವೃದ್ಧಿಗೆ ಸಾಕಷ್ಟು ಹಣ ನೀಡುತ್ತಿದ್ದು ಕ್ಷೇತ್ರದಲ್ಲಿ ಅಭಿವೃದ್ಧಿಗೆ ಅತೀ ಹೆಚ್ಚು ಹಣವನ್ನು ಪಡೆದ ಶಾಸಕ ಮಂಕಾಳ ವೈದ್ಯರನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಮಂಕಾಳ ವೈದ್ಯ ಮಾತನಾಡಿ ಬಡವರಿಗೆ ಉನ್ನತ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶ ನಮ್ಮದು. ನಮ್ಮ ದೇಶದ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಅಭಿವೃದ್ಧಿಯಾಗಬೇಕು. ಪ್ರತಿಯೋರ್ವರೂ ಕೂಡಾ ಉನ್ನತ ಶಿಕ್ಷಣ ಪಡೆದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಪ್ರತಿ ವಿದ್ಯಾರ್ಥಿಗಳೂ ಕೂಡಾ ತಮ್ಮ ಗುರಿಯನ್ನು ಮುಟ್ಟುವ ತನಕ ವಿರಮಿಸದೇ ಸತತ ಪ್ರಯತ್ನ ಮಾಡುವಂತೆ ಅವರು ಕರೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ತಾ.ಪಂ.ಅಧ್ಯಕ್ಷ ಈಶ್ವರ ಬಿ. ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ಸದಸ್ಯ ಮಹಾಬಲೇಶ್ವರ ನಾಯ್ಕ, ಜಾಲಿ ಪ.ಪಂ. ಅಧ್ಯಕ್ಷ ಅಬ್ದುಲ್ ರಹೀಮ್, ರಾಮಾ ಮೊಗೇರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳು, ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ಡಾ. ಅಶೋಕ, ಸಹಾಯಕ ಆಯುಕ್ತ ಎಂ. ಎನ್. ಮಂಜುನಾಥ, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು, ಕಾರವಾರ ಸರಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ವಿಶ್ವಾನಾಥ ಹೆಗಡೆ, ಸರಕಾರಿ ಕಾಲೇಜುಗಳ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.
ಭಟ್ಕಳ ಸರಕಾರಿ ಕಾಲೇಜಿನ ಪ್ರಾಂಶುಪಾಲೆ ಮಂಜುಳಾ ಕೆ.ಪಿ. ಸ್ವಾಗತಿಸಿದರು. ಗ್ರಂಥಪಾಲ ನರಸಪ್ಪ ವಿದ್ಯಾರ್ಥಿಗಳ ಹೆಸರು ಓದಿರು. ಕನ್ನಡ ಉಪನ್ಯಾಸಕಿ ಶೈಲಜಾ ಶೆಡ್ತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







