ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹ: ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಧರಣಿ

ಪುತ್ತೂರು, ಜ. 8: ಜಿಲ್ಲೆಯ ರೈತರು ಮತ್ತು ಜನಸಾಮಾನ್ಯರ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಪ್ರತಿ ತಿಂಗಳ ಪ್ರಥಮ ಸೋಮವಾರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, 2 ನೇ ಧರಣಿ ಸತ್ಯಾಗ್ರಹವು ಸೋಮವಾರ ಪುತ್ತೂರು ಮಿನಿವಿಧಾನ ಸೌಧದ ಮುಂಭಾಗಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಮಲೆನಾಡು ಭಾಗದ ಜನಸಾಮಾನ್ಯರ ಹಾಗೂ ರೈತರ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ನ್ಯಾಯ ಸಿಗುವವರೆಗೂ ತಿಂಗಳ ಮೊದಲ ಸೋಮವಾರದಂದು ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ರಾಜ್ಯ ಹಾಗೂ ಕೇಂದ್ರ ಸರಕಾರ ಮಲೆನಾಡು ಭಾಗದ ಜನರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಸಹಾಯಕ ಕಮಿಷನರ್ ಅವರು ಕೃಷಿಕರನ್ನು ಸಮಾಲೋಚನೆಗೆ ಕರೆಯಬೇಕು ಎಂದು ಆಗ್ರಹಿಸಿದರು.
ಧರಣಿ ನಿರತರ ಪ್ರಮುಖ ಬೇಡಿಕೆಗಳು
ಒತ್ತುವರಿ ನೆಪದಲ್ಲಿ ರೈತರ ಕೃಷಿ ಭೂಮಿ ತೆರವಿಗೆ ಸರಕಾರ ನೊಟೀಸ್ ಕೊಟ್ಟು ಮಾನಸಿಕ ಹಿಂಸೆ ಕೊಡುವುದನ್ನು ತತ್‌ಕ್ಷಣ ನಿಲ್ಲಿಸಬೇಕು, ಪರಿಸರ ಸಂರಕ್ಷಣೆ ನೆಪದಲ್ಲಿ ರೈತರ ಕೃಷಿ ಭೂಮಿಯನ್ನು ಅರಣ್ಯಕ್ಕೆ ಸೇರ್ಪಡೆ ಮಾಡುವ ಯೋಜನೆಯನ್ನು ರದ್ದು ಮಾಡಬೇಕು, ಹತ್ತಾರು ವರ್ಷಗಳಿಂದ ವಾಸ್ತವ್ಯ ಹೂಡಿರುವ ಮನೆಯ ಅಡಿ ಸ್ಥಳಕ್ಕೆ ನಿವೇಶನ ಹಕ್ಕು ಪತ್ರ ಕೊಡಬೇಕು. ನಿವೇಶನ ಇಲ್ಲದ ಕುಟುಂಬಕ್ಕೆ ನಿವೇಶನಕ್ಕೆ ಸರಕಾರಿ ಸ್ಥಳದಲ್ಲಿ ಜಾಗ ನೀಡಬೇಕು, ಪ್ಲಾಟಿಂಗ್ ಆಗದ ಜಾಗವನ್ನು ಕಂದಾಯ ಇಲಾಖೆಯೇ ಅತೀ ಶೀಘ್ರದಲ್ಲಿ ಉಚಿತವಾಗಿ ಪ್ಲಾಟಿಂಗ್ ಮಾಡಿಕೊಡಬೇಕು, ಸಾಲ ಮನ್ನಾದ ಪೂರ್ತಿ ಸವಲತ್ತು ಪ್ರತಿಯೊಬ್ಬ ರೈತರಿಗೂ ಸಿಗುವಂತ್ತಾಗಬೇಕು, ರಬ್ಬರು ನಿಗಮದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಕಾರ ನೀಡಿರುವಂತಹ ವಸತಿಯನ್ನು ಅವರಿಗೆ ಬಿಟ್ಟುಕೊಡಬೇಕು. ಅಥವಾ ಬದಲಿ ವ್ಯವಸ್ಥೆ ಮಾಡಬೇಕು, ಉದ್ಯೋಗ ಖಾತ್ರಿ, ತೋಟಗಾರಿಕೆ, ಕೃಷಿ ಇಲಾಖೆ, ಸಂಬಂಧಪಟ್ಟ ರೈತನಿಗೆ ಸಿಗುವ ಸವಲತ್ತು ಆತ ಕೆಲಸ ಮಾಡಿದ ತತ್‌ಕ್ಷಣ ಸಿಗಬೇಕು, ಇಲಾಖೆಗಳಲ್ಲಿನ ಸಂಪೂರ್ಣ ಭ್ರಷ್ಟಾಚಾರ ನಿಲ್ಲುವವರೆಗೂ ಧರಣಿ, 94ಸಿಯ ಹಕ್ಕು ಪತ್ರ ನೀಡುವುದರಲ್ಲಿ ವಿಳಂಬ ಮುಕ್ತ ಮಂಜೂರು ಆದ ಹಕ್ಕು ಪತ್ರಗಳಿಗೆ ಪಹಣಿ ಪತ್ರ ನೀಡುವುದು ಮತ್ತು ಮದ್ಯವರ್ತಿಗಳ ಹಾವಳಿಗಳಿಂದ ವಿಳಂಬ ಆಗುತ್ತಿರುವುದರ ವಿರುದ್ಧ, ರೈತರಿಗೆ ಸಿಗುವ ಸವಲತ್ತುಗಳ ಮಾಹಿತಿಗಳು ಗ್ರಾಮ ಪಂಚಾಯತ್‌ನಲ್ಲಿ ಸಿಗುವಂತ್ತಾಗಬೇಕು. ಕೃಷಿಗೆ ಸಂಬಂಂಧಪಟ್ಟ ಎಲ್ಲಾ ಇಲಾಖೆಯ ಅರ್ಜಿಗಳು, ಸವಲತ್ತುಗಳು ಗ್ರಾ.ಪಂ. ಮೂಲಕ ಕೊಡುವಂತಾಗಬೇಕು ಎಂಬುದು ಧರಣಿ ನಿರತರ ಪ್ರಮುಖ ಬೇಡಿಕೆಯಾಗಿದೆ.
ಧರಣಿಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಮುಖಂಡರಾದ ಗುಣವತಿ ಕೊಲ್ಲಂತಡ್ಕ, ಮೋಹನ್ ಪಿಳ್ಳೆ ಅಡ್ಡಹೊಳೆ, ವಿ.ಟಿ. ಜಾಯ್ಸೆ, ಸತೀಶ್ ಕಲ್ಮಕಾರು, ಚಿದಾನಂದ ಕೊಲ್ಲಮೊಗ್ರು, ದಿನೇಶ್ ಕರ್ಮಲ ಮತ್ತಿತರರು ಉಪಸ್ಥಿತರಿದ್ದರು. ಬೆಳಗ್ಗಿನಿಂದ ಸಂಜೆ ತನಕ ಧರಣಿ ನಡೆಸಿದ ವೇದಿಕೆ ಕಾರ್ಯ ಕರ್ತರು ವಿವಿಧ ಬೇಡಿಕೆಗಳ ಮನವಿಯನ್ನು ಸಹಾಯಕ ಕಮಿಷನರ್‌ಗೆ ಸಲ್ಲಿಸಿದರು.







