ಹಲವು ಹಿಂದೂಗಳ ಹತ್ಯೆಯ ಹಿಂದೆ ಸಂಘಪರಿವಾರದವರಿದ್ದಾರೆ: ದಿನೇಶ್ ಗುಂಡೂರಾವ್

ಬೆಂಗಳೂರು, ಜ.8: ದೀಪಕ್ ರಾವ್ ಕೊಲೆ ಹಿಂದೆ ಬಿಜೆಪಿ ಕಾರ್ಪೊರೇಟರ್ ಕೈವಾಡವಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ.
ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮಾಹಿತಿ ಇಲ್ಲದೆ ವಿನಾಕಾರಣ ಆರೋಪ ಮಾಡಿರುವುದಿಲ್ಲ. ಬಶೀರ್ ಹತ್ಯೆಯ ಹಿಂದೆಯೂ ಸಂಘಪರಿವಾರದ ಕೈವಾಡವಿರಬಹುದು ಎಂದು ಗುಂಡೂರಾವ್ ಆರೋಪಿಸಿದರು.
ಹಲವು ಹಿಂದೂಗಳ ಹತ್ಯೆಯ ಹಿಂದೆ ಸಂಘಪರಿವಾರದವರು ಇದ್ದಾರೆ. ಹರೀಶ್ ಪೂಜಾರಿ ಕೊಲೆ ಹಿಂದೆಯೂ ಸಂಘಪರಿವಾರದವರು ಇದ್ದರು. ಪಿಎಸ್‌ಐ ಕಲ್ಲಪ್ಪ ಹಂಡಿಭಾಗ್ ಪ್ರಕರಣದಲ್ಲಿ ಬಜರಂಗದಳದ ಸದಸ್ಯ ಮೊದಲ ಆರೋಪಿಯಾಗಿದ್ದಾನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ದೀಪಕ್ ರಾವ್ ಪ್ರಕರಣವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ವಿಷಯಾಧಾರಿತವಾಗಿ ಚುನಾವಣೆಯನ್ನು ಎದುರಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಕೊಲೆ, ಹತ್ಯೆ ಇಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಮುಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತಿಗೆ ಬೆಲೆ ಇಲ್ಲದಂತಾಗಿದೆ. ಡಿ.15ರೊಳಗೆ ರೈತರಿಗೆ ಮಹಾದಾಯಿ ನೀರು ಕೊಡಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ, ಈವರೆಗೆ ಅದು ಸಾಧ್ಯವಾಗಿಲ್ಲ. ಬಿಜೆಪಿ ಮುಖಂಡರ ರೀತಿ ನಮಗೆ ಹತ್ತಾರು ನಾಲಿಗೆ ಇಲ್ಲ. ನಮಗಿರುವುದು ಒಂದೇ ನಾಲಿಗೆ. ತಪ್ಪು ಮಾತನಾಡಿದರೆ ಕ್ಷಮೆ ಕೇಳಿ ಬಿಡುತ್ತೇವೆ. ಇವರಂತೆ ಸುಳ್ಳು ಹೇಳಿಕೊಂಡು ಓಡಾಡುವುದಿಲ್ಲ ಎಂದು ಅವರು ವ್ಯಂಗ್ಯವಾಡಿದರು.







