ಮಂಗಳೂರು: ಕೋರೆಗಾಂವ್ ಶೌರ್ಯ ದಿನಾಚರಣೆಯಲ್ಲಿ ದೌರ್ಜನ್ಯ; ದಲಿತ ಸಂಘಟನೆಗಳಿಂದ ಧರಣಿ

ಮಂಗಳೂರು, ಜ.8: ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಶೌರ್ಯ ದಿನಾಚರಣೆಯ ವೇಳೆ ದಲಿತರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ದ.ಕ. ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ವತಿಯಿಂದ ಸೋಮವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ದಲಿತ ಸಂಘಟನೆಯ ಮುಖಂಡ ದೇವದಾಸ್ ಮಾತನಾಡಿ, ದಲಿತರು ತಮ್ಮ ಸ್ವಾಭಿಮಾನವನ್ನು ಮೆರೆದ ಆ ದಿನವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ಪ್ರತಿ ವರ್ಷ ಜನವರಿ 1ರಂದು ಲಕ್ಷಾಂತರ ಜನರನ್ನು ಸೇರಿಸಿ ಶೌರ್ಯ ದಿನ ಆಚರಿಸುತ್ತಿದ್ದರು. ದಲಿತರ ಮೇಲೆ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕಿದ ಮರಾಠ ಪೇಶ್ವೆ 2ನೇ ಬಾಜಿರಾಯ ಹಾಗೂ ಬ್ರಿಟಿಷರ ನಡುವೆ ನಡೆದ ಯುದ್ಧದಲ್ಲಿ ಪೇಶ್ವೆ ಸೈನಿಕರನ್ನು ಹೀನಾಯವಾಗಿ ಸೋಲಿಸಲಾಗಿತ್ತು. ಇದನ್ನು ವಿಜಯ ದಿವಸವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕೋರೆಗಾಂವ್ ಸ್ಮಾರಕವು ದಲಿತ ಪಾಲಿನ ಶೌರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಅದರಂತೆ ದೇಶದ ವಿವಿಧೆಡೆಗಳಿಂದ ಆಗಮಿಸಿದ ದಲಿತ ಸಂಘಟನೆಗಳ ಲಕ್ಷಾಂತರ ಕಾರ್ಯಕರ್ತರು ಸೇರಿ ವಿಜಯೋತ್ಸವ ನಡೆಸುವುದನ್ನು ಸಹಿಸಲಾದ ಕೋಮುವಾದಿಗಳು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿ ದಲಿತ ಮೇಲೆ ದೌರ್ಜನ್ಯ ನಡೆಸಿದ್ದಾರೆ. ದ.ಕ. ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ದೇವದಾಸ್ ಹೇಳಿದರು.
ಧರಣಿಯಲ್ಲಿ ದಲಿತ ಸಂಘಟನೆಯ ಮುಖಂಡರಾದ ಎಸ್.ಪಿ. ಆನಂದ, ರಘುವೀರ್ ಸೂಟರ್‌ಪೇಟೆ, ರಘು ಎಕ್ಕಾರ್, ರಮೇಶ್ ಕೋಟ್ಯಾನ್, ಜಗದೀಶ ಪಾಂಡೇಶ್ವರ, ದಿನೇಶ್ ಮೂಳೂರು, ಸರೋಜಿನಿ, ಯಶೋದಾ, ಡಿವೈಎ್ಐ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಆಶಾ, ಬೌದ್ಧ ಮಹಾಸಭಾದ ಕಾಂತಪ್ಪ ಅಲಂಗಾರು, ಕಮಲಾಕ್ಷ ಬಜಾಲ್, ಭಾಸ್ಕರ್ ಬಜಪೆ, ಲಕ್ಷಣ್ ಬಜಪೆ, ಭಾಸ್ಕರ ಮೂಳೂರು ಮುಂತಾದವರು ಉಪಸ್ಥಿತರಿದ್ದರು.
ಕೃಷ್ಣಾನಂದ ಬಜಪೆ ಪ್ರಾಸ್ತಾವಿಕ ಮಾತನಾಡಿದರು. ಅಶೋಕ್ ಕೊಂಚಾಡಿ ಕಾರ್ಯಕ್ರಮ ನಿರೂಪಿಸಿದರು.







