‘ಕಲಾಂ ಕ್ಯಾಂಪೈನ್ ನ್ಯಾಷನಲ್ ಲಾಂಚ್’ ಕಾರ್ಯಕ್ರಮ

ಮಂಗಳೂರು, ಜ.8: ದೇಶಕ್ಕೆ ಮಹತ್ತರವಾದ ಕೊಡುಗೆ ನೀಡಿರುವ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರನ್ನು ಈ ದೇಶ ಎಂದೂ ಮರೆಯಲು ಸಾಧ್ಯವಿಲ್ಲ. ಮಾನವೀಯ ವೌಲ್ಯದ ಪ್ರತಿರೂಪವಾಗಿದ್ದ ಅವರು ಒಬ್ಬ ಶ್ರೇಷ್ಠ ವಿಜ್ಞಾನಿ ಎಂದು ಮಂಗಳೂರಿನ ಯುನಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸಿ.ಪಿ.ಹಬೀಬ್ ರೆಹಮಾನ್ ಹೇಳಿದರು.
ನಗರದ ಎಸ್‌ಡಿಎಂ ಕಾಲೇಜಿನಲ್ಲಿ ಸೋಮವಾರ ನಡೆದ ‘ಕಲಾಂ ಕ್ಯಾಂಪೈನ್ ನ್ಯಾಷನಲ್ ಲಾಂಚ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಾಂ ಅವರನ್ನು ಹಲವು ಬಾರಿ ಭೇಟಿಯಾಗಿದ್ದೆ. ಅವರ ಮಾತು, ಸರಳ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿಯಾದುದು. ಅವರು ರಾಷ್ಟ್ರಪತಿ ಆದಾಗ ಓರ್ವ ವಿಜ್ಞಾನಿ ಏನು ಸಾಧನೆ ಮಾಡಲು ಸಾಧ್ಯ ಎಂದು ಹಲವಾರು ಮಂದಿ ಮಾತಾಡಿಕೊಂಡಿದ್ದರು. ಆದರೆ ದೇಶ ಹಿಂದೆಂದೂ ಕಾಣದ ಬದಲಾವಣೆಗೆ ಕಲಾಂ ಕಾರಣರಾದರು ಎಂದು ಡಾ. ಸಿ.ಪಿ. ಹಬೀಬ್ ರೆಹಮಾನ್ ನುಡಿದರು.
ಕಲಾಂ ಕ್ಯಾಂಪೈನ್ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಡಾ.ಪ್ರತಿಮಾ ತೋಟ್ಲಾ ಮಾತನಾಡಿ, ಯುವಜನತೆ ಕಲಾಂ ಅವರ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಬಗ್ಗೆ ಅಪಾರ ಪ್ರೇಮ ಹೊಂದಿದ್ದ ಅಬ್ದುಲ್ ಕಲಾಂ ದೇಶದ ಭಾವೀ ಪ್ರಜೆಗಳಾದ ವಿದ್ಯಾರ್ಥಿಗಳ ಮೇಲೆ ವಿಶೇಷ ಭರವಸೆ ಹೊಂದಿದ್ದರು ಎಂದು ಅವರು ಅಭಿಪ್ರಾಯಪಟ್ಟರು.
ಎಸ್‌ಡಿಎಂ ಬ್ಯುಸಿನೆಸ್‌ಮೆಂಟ್ ಕಾಲೇಜಿನ ನಿರ್ದೇಶಕ ಡಾ.ಕೆ.ದೇವರಾಜ್, ಎ.ಜೆ. ಆಸ್ಪತ್ರೆಯ ಡಾ.ದೇವನ್, ಪ್ರಮುಖರಾದ ಎ.ಎಂ.ಲೋಬೊ, ಅಬ್ದುಲ್ ರಹೀಂ, ಪಿ.ಎ. ಜೋಸ್ ಮತ್ತಿತರರು ಉಪಸ್ಥಿತರಿದ್ದರು.







