ಸೌಹಾರ್ದ ಸಂದೇಶ ಸಾರುವ ಅಕ್ಷರೊತ್ಸವಗಳು ನಿರಂತರವಾಗಿ ನಡೆಯಲಿ: ಶಾಸಕ ಅಭಯಚಂದ್ರ ಜೈನ್
ಮೂಡುಬಿದಿರೆ, ಜ.8: ಜಿಲ್ಲೆಯಲ್ಲಿ ಎರಡೂವರೆ ದಶಕಗಳಿಂದ ಸಾಕ್ಷರತಾ ಅಭಿಯಾನದಡಿ ಅಕ್ಷರ ಅರಿವು, ಅಭಿವೃದ್ಧಿಯೊಂದಿಗೆ ಎಲ್ಲ ವರ್ಗವನ್ನು ಸಂಘಟಿಸುವ ಮತ್ತು ಎಲ್ಲರ ಸಬಲೀಕರಣಕ್ಕೆ ಪೂರಕವಾಗಿ ನಡೆಯುತ್ತಿರುವ ಸೌಹಾರ್ದದ ಸಂದೇಶ ಸಾರುವ ವಾರ್ಷಿಕ ಅಕ್ಷರೋತ್ಸವಗಳು ನಿರಂತರವಾಗಿ ನಡೆಯಲಿ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ನೆಲ್ಲಿಕಾರು ಗ್ರಾಪಂ ವ್ಯಾಪ್ತಿಯ ಬೋರುಗುಡ್ಡೆ ಅಂಗನವಾಡಿ ವಠಾರದಲ್ಲಿ ಸುಗ್ರಾಮ ಸಂಘ, ಜಾಗೃತಿ ವೇದಿಕೆ, ಗ್ರಾಮ ವಿಕಾಸ ಕೇಂದ್ರ, ಗ್ರಾಪಂ, ಜನ ಶಿಕ್ಷಣ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆದ ಅಕ್ಷರೋತ್ಸವವನ್ನು ಸೋಲಾರ್ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತಾನಾಡಿದರು. ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ನುಡಿದಂತೆ ಅನಕ್ಷರತೆ ಒಂದು ಶಾಪ. ಅದನ್ನು ತೊಡೆದು ಹಾಕುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು. ಸಾಕ್ಷರತೆಯಿಂದಾಗಿ ಜಿಲ್ಲೆಯ ಕಟ್ಟಕಡೆಯ ಜನರು ಅಕ್ಷರದ ಅರಿವು ಮತ್ತು ಮೌನ ಮುರಿದು ಮಾತಾನಾಡುವ ಶಕ್ತಿ ಪಡೆದು ಸರಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ತಾವೇ ಮಾಡಿಕೊಳ್ಳುವ ಹಂತಕ್ಕೆ ತಲುಪಿರುವುದು ಶ್ಲಾಘನೀಯ ವಿಷಯ ಎಂದು ಅಭಯಚಂದ್ರ ಜೈನ್ ನುಡಿದರು
ಬೋರುಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಐ-ಪ್ಯಾಡ್ ಅಳವಡಿಸಲು ವೈಯಕ್ತಿಕ 10,000 ರೂ. ದೇಣಿಗೆಯನ್ನು ಅಂಗನವಾಡಿ ಕಾರ್ಯಕರ್ತೆ ಗುಣವತಿ, ಜಾಗೃತಿ ವೇದಿಕೆಯ ಕಮಲ ಅವರಿಗೆ ಹಸ್ತಾಂತರಿಸಿದರು. ನೆಲ್ಲಿಕಾರು ಗ್ರಾಪಂ ವ್ಯಾಪ್ತಿಯ 6 ಅಂಗನವಾಡಿಗಳಿಗೆ ಐ-ಪ್ಯಾಡ್ ಅಳವಡಿಸುವ ಯೋಜನೆಗೆ ಗ್ರಾಪಂ ವತಿಯಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಗ್ರಾಪಂ ಅಧ್ಯಕ್ಷ ಜಯಂತ್ ತಿಳಿಸಿದರು. ಗ್ರಾಪಂ ಉಪಾಧ್ಯಕ್ಷ ಕುಶಲ, ತಾಪಂ ಸದಸ್ಯೆ ರೇಖಾ ಸಾಲ್ಯಾನ್, ಸದಸ್ಯರಾದ ಭಾರತೀ, ಸುನಂದ, ಶಶಿಧರ್, ಉದಯ ಕುಮಾರ್, ಜಿಲ್ಲಾ ನೆರವು ಘಟಕದ ಸಂಯೋಜಕಿ ಮಂಜುಳಾ, ಮಹಿಳಾ ಪೊಲೀಸ್ ಜ್ಯೋತಿ, ಪಿಡಿಒ ಪ್ರಶಾಂತ್ ಶೆಟ್ಟಿ, ಶಿಕ್ಷಣ ಸಂಯೋಜಕ ದಿನೇಶ್, ವಾಲ್ಪಾಡಿ ಗ್ರಾಪಂ ಸದಸ್ಯೆ ಸುಶೀಲಾ ಬೋರುಗುಡ್ಡೆ, ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಸಬಲೀಕರಣದ ಯಶೋಗಾಥೆ ಬಗ್ಗೆ ನಿರೂಪಿಸಿದರು. ಕಮಲ, ಸುನೀತಾ, ಗುಣವತಿ, ಚಂಚಲಾ ಕಾರ್ಯಕ್ರಮ ಸಂಯೋಜಿಸಿದ್ದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.







