ಮನೆಗಳ್ಳತನ :ಇಬ್ಬರು ಕಳ್ಳರ ಬಂಧನ
ಮೈಸೂರು,ಜ.8: ನಗರದ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಿಮೊಹಲ್ಲ, ಪಟ್ಟೇಗಾರ ಸ್ಟ್ರೀಟ್ ಮೂರನೇ ಕ್ರಾಸ್ ನಲ್ಲಿರುವ ಮನೆಯೊಂದರಲ್ಲಿ ಚಿನ್ನಾಭರಣ ದೋಚಿದ ಇಬ್ಬರು ಮನೆಗಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದರು.
ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಧಿತರನ್ನು ಬನ್ನಿಮಂಟಪ ಬಡಾವಣೆಯ ಹನುಮಂತನಗರದ ನಿವಾಸಿಗಳಾದ ರಿಯಾಜ್ ಷರೀಪ್ ಬಿನ್ ಇಸ್ಮಾಯಿಲ್ ಷರೀಪ್(42), ಫಯಾಜ್ ಷರೀಪ್ ಅಲಿಯಾಸ್ ಫಯಾಜ್ ಬಿನ್ ರಿಯಾಜ್ ಷರೀಫ್ (22)ಎಂದು ಗುರುತಿಸಲಾಗಿದ್ದು, ಇವರು ಮಂಡಿ ಠಾಣಾ ವ್ಯಾಪ್ತಿಯ 3ನೇ ಕ್ರಾಸ್ ನಲ್ಲಿರುವ ಮನೆಯನ್ನು ಡಿ.31ರಂದು ಮನೆಯವರು ಮೇಲುಕೋಟೆ ದೇವಸ್ಥಾನಕ್ಕೆ ಹೋಗಿದ್ದಾಗ ಕಳವುಗೈದಿದ್ದರು. ಈ ಕುರಿತು ಕಳವಾಗಿರುವ ಮನೆಯ ಮಾಲಿಕರು ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಪ್ರಮುಖ ಆರೋಪಿ ರಿಯಾಜ್ ಪಾಷಾ ನನ್ನು ರವಿವಾರ ದಸ್ತಗಿರಿ ಮಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ 23,00,000ರೂ.ನಗದು 6 ಲಕ್ಷ ಮೌಲ್ಯದ 208ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಗೂಡ್ಸ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಚಿನ್ನಾಭರಣವನ್ನು ತೆಗೆದು, ಖಾಲಿ ಲಾಕರನ್ನು ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆಯಲ್ಲಿ ಎಸೆದಿದ್ದು, ಈ ಲಾಕರನ್ನು ಕೂಡ ದಳವಾಯಿ ಕೆರೆಯಿಂದ ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ. ಕಳ್ಳತನ ನಡೆಸಿದ ಆರೋಪಿಗಳು ಮನೆಯ ಮಾಲೀಕರಿಗೆ ಬ್ಯುಸಿನೆಸ್ ನಲ್ಲಿ ಪರಿಚಯಸ್ಥರಾಗಿದ್ದರು. ಮನೆಯ ಮಾಲಿಕರು ಹೊರಗಡೆ ಹೋಗುವಾಗ ಮನೆಯ ಬೀಗ ಹಾಕಿ ಬೀಗವನ್ನು ಎರಡನೇ ಮಹಡಿಯ ಸಜ್ಜದ ಮೇಲೆ ಇಟ್ಟು ಹೋಗುತ್ತಿದ್ದ ವಿಚಾರವನ್ನು ಸಹ ತಿಳಿದುಕೊಂಡಿದ್ದರು. ರಿಯಾಜ್ ಷರೀಪ್ ತನ್ನ ಮಗನೊಂದಿಗೆ ಸೇರಿ ಕೃತ್ಯವೆಸಗಿದ್ದಾನೆ. ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.
ಅಪರಾಧ ವಿಭಾಗದ ಡಿಸಿಪಿ ಡಾ. ವಿಕ್ರಂ ಆಮಟೆ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ, ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಸಿಸಿಪಿ ಪೊಲೀಸ್ ಇನ್ಸ್ ಪೆಕ್ಟರ್ ಆರ್.ಜಗದೀಶ್, ಎಸ್ ಐ ಚಂದ್ರೇಗೌಡ, ಸಿಬ್ಬಂದಿಗಳಾದ ಗಣೇಶ್, ಎಂ.ಆರ್, ಯಾಕೂಬ್ ಷರೀಫ್, ಶಿವರಾಜು ಸಿ.ಎಸ್, ಲಕ್ಷ್ಮಿಕಾಂತ್, ನಿರಂಜನ್, ಪ್ರಕಾಶ್, ರಾಜೇಂದ್ರ ಆನಂದ್, ರಾಮಸ್ವಾಮಿ, ಸೋಮಶೇಟ್ಟಿ, ಚಾಮುಂಡಮ್ಮ, ವೀಣಾ, ಶಿವಕುಮಾರ್, ಗೌತಮ್ ಪಾಲ್ಗೊಂಡಿದ್ದು ಅವರ ಕಾರ್ಯವನ್ನು ಶ್ಲಾಘಿಸಿದರು. ಇದೇ ವೇಳೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.







