ಭಾಷೆಯನ್ನು ಅರ್ಥೈಸಿಕೊಂಡು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ: ಪ್ರೊ.ಯಾರ್ಲಗಡ್ಡ ಲಕ್ಷ್ಮೀಪ್ರಸಾದ್
ಮೈಸೂರು,ಜ.8: ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಇತಿಹಾಸ ಹಾಗೂ ಪರಂಪರೆ ಇದೆ, ಅದನ್ನು ಅರ್ಥೈಸಿಕೊಂಡು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪದ್ಮಭೂಷಣ ಪ್ರೊ.ಯಾರ್ಲಗಡ್ಡ ಲಕ್ಷ್ಮಿ ಪ್ರಸಾದ್ ತಿಳಿಸಿದರು.
ಸೋಮವಾರ ಭಾರತೀಯ ಭಾಷಾ ಸಂಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ದಕ್ಷಿಣ ಏಷ್ಯಾ ಭಾಷೆಗಳು ಮತ್ತು ಸಾಹಿತ್ಯಗಳ 13ನೇ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ದಕ್ಷಿಣ ಏಷ್ಯಾದಲ್ಲಿ 650ಕ್ಕೂ ಹೆಚ್ಚು ಭಾಷೆಗಳಿವೆ. ಈ ಭಾಷೆಗಳ ಪೈಕಿ ಹಲವು ಭಾಷೆಗಳು ಹೆಚ್ಚು ಬಳಕೆಯಾಗುತ್ತಿದ್ದು, ಕೆಲವು ಭಾಷೆಗಳು ಅಳಿವಿನಂಚಿಗೆ ಸಾಗುತ್ತಿವೆ. ಈ ನಿಟ್ಟಿನಲ್ಲಿ ಭಾಷೆಗಳ ಸ್ಥಿತಿ ಗತಿ ಹಾಗೂ ಸಾಹಿತ್ಯ ಅವಲೋಕನ ಬಹಳ ಮುಖ್ಯವಾಗಿದೆ. ಯಾವುದೇ ಭಾಷೆಯಾಗಿರಲಿ ಆ ಭಾಷೆಗೆ ತನ್ನದೇ ಆತ ಇತಿಹಾಸವಿರುತ್ತದೆ. ಆ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಿದರು.
ಭಾಷೆಗಳ ಸ್ಥಿತಿಗತಿ ಮತ್ತು ಅಭಿವೃದ್ಧಿಗೆ ಇಂತಹ ಸಮ್ಮೇಳನಗಳನ್ನು ಹಮ್ಮಿಕೊಳ್ಳುವುದು ಅವಶ್ಯಕವಾಗಿದೆ. ಭಾಷೆಯಲ್ಲಿ ಜ್ಞಾನದ ಭಂಡಾರವೇ ಅಡಗಿರುತ್ತದೆ. ಇದರ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕು. ಯಾವುದೇ ಭಾಷೆಯ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಜಾಗತೀಕರಣದ ಹಿನ್ನೆಲೆಯಲ್ಲಿ ಹಲವು ಭಾಷೆಗಳು ನಶಿಸಿ ಹೋಗಿದ್ದರೂ ಹಲವು ಭಾಷೆಗಳು ಪ್ರಚಲಿತದಲ್ಲಿವೆ ಎಂದರು.
ಕಾರ್ಯಕ್ರಮದಲ್ಲಿ ಭಾಭಾಸಂ ನಿರ್ದೇಶಕ ಪ್ರೊ.ಡಿ.ಜಿ.ರಾವ್ ,ಮಾಸ್ಕೋ ರಾಜ್ಯ ವಿವಿಯ ಪ್ರೊ.ಬೋರಿಸ್ ಎ.ಝಕಾರಿನ್ ಮತ್ತು ಲೂದ್ ಮಿಲಾ ಖೋಖ್ಲೋವ ಮತ್ತು ಪ್ರೊ.ಓಂಕಾರ್ ಎನ್.ಕೌಲ್, ದಕ್ಷಿಣ ಏಷ್ಯಾದ ಭಾಷೆಗಳು ಮತ್ತು ಸಾಹಿತ್ಯಗಳ 13ನೇ ಅಂತಾರಾಷ್ಟ್ರೀಯ ಸಮ್ಮೇಳನದ ಜೊತೆ ಕಾರ್ಯದರ್ಶಿ ಪ್ರೊ.ಎಲ್ ರಾಮಮೂರ್ತಿ, ಸಂಘಟನಾ ಕಾರ್ಯದರ್ಶಿ ಪ್ರೊ.ಉಮಾರಾಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.







