ಬೆಂಗಳೂರು: ಜ.14 ರಂದು ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರ
ಬೆಂಗಳೂರು, ಜ.9: ಫ್ರೆಂಡ್ಸ್ ವೆಲ್‌ಫೇರ್ ಆರ್ಗನೈಸೇಷನ್ ವತಿಯಿಂದ ನಗರದ ವಗೂಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ.14 ಮತ್ತು 15 ರಂದು ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರ ಆಯೋಜಿಸಲಾಗಿದೆ.
ಸಾವಿರಾರು ಬಡ ಜನರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಅವರ ಬದುಕನ್ನು ಹಸನುಗೊಳಿಸುವಂತೆ ಮಾಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದ್ದು, ಕಳೆದ 21 ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷದ ಶಿಬಿರದಲ್ಲಿ ಜರ್ಮನಿಯ ನುರಿತ ಪ್ಲಾಸ್ಟಿಕ್ ತಜ್ಞರ ತಂಡ ಆಗಮಿಸಿ ಸೂಕ್ತ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲಿದ್ದು, ಸೀಳು ತುಟಿ, ಸೀಳು ಮೇಲ್ದವಡೆ, ಸುಟ್ಟ ಗಾಯಗಳಿಂದ ಚರ್ಮಕ್ಕೆ ಆಗಿರುವ ಹಾನಿಯನ್ನು ಈ ಪ್ಲಾಸ್ಟಿಕ್ ಸರ್ಜರಿ ಶಿಬಿರದಲ್ಲಿ ಸರಿಪಡಿಸಲಾಗುವುದು.
ಜ.14 ರಂದು ತಪಾಸಣೆ ನಡೆಯಲಿದ್ದು, ಜ.15 ರಂದು ಅಗತ್ಯವಿದ್ದವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಶಿಬಿರದಲ್ಲಿ ಪಾಲ್ಗೊಳ್ಳುವ ರೋಗಿಗಳು ಜ.14 ಬೆಳಗ್ಗೆ 8 ಗಂಟೆಗೆ ತಪಾಸಣಾ ಶಿಬಿರದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ 95913 98060 ಅಥವಾ 95913 98489 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.





