ಹಡಗುಗಳ ಢಿಕ್ಕಿ: ನಾಪತ್ತೆಯಾಗಿರುವ 32 ಸಿಬ್ಬಂದಿಗಾಗಿ ಮುಂದುವರಿದ ಶೋಧ

ಬೀಜಿಂಗ್, ಜ. 8: ಚೀನಾದ ಕರಾವಳಿಯಲ್ಲಿ ಅಪಘಾತಕ್ಕೀಡಾಗಿರುವ ಇರಾನ್‌ನ ತೈಲ ಹಡಗಿನಿಂದ ನಾಪತ್ತೆಯಾಗಿರುವ 32 ಸಿಬ್ಬಂದಿಯ ಶೋಧ ಕಾರ್ಯಾಚರಣೆಯಲ್ಲಿ ಅಮೆರಿಕದ ನೌಕಾಪಡೆಯೂ ಕೈಜೋಡಿಸಿದೆ.
ಶನಿವಾರ ತಡ ರಾತ್ರಿ ತೈಲ ಟ್ಯಾಂಕರ್ ಹಡಗು ಮತ್ತು ಸರಕು ಸಾಗಾಟದ ಹಡಗೊಂದರ ನಡುವೆ ಢಿಕ್ಕಿ ಸಂಭವಿಸಿದ ಬಳಿಕ ತೈಲ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ತೈಲ ಟ್ಯಾಂಕರ್‌ನಲ್ಲಿದ್ದ 30 ಇರಾನಿಯನ್ನರು ಮತ್ತು ಇಬ್ಬರು ಬಾಂಗ್ಲಾದೇಶೀಯರು ನಾಪತ್ತೆಯಾಗಿದ್ದಾರೆ. ಅವರ ಶೋಧಕ್ಕಾಗಿ ಚೀನಾ, ದಕ್ಷಿಣ ಕೊರಿಯ ಮತ್ತು ಅಮೆರಿಕಗಳು ನೌಕೆಗಳು ಮತ್ತು ವಿಮಾನಗಳನ್ನು ಕಳುಹಿಸಿವೆ.
ಅಮೆರಿಕದ ನೌಕಾ ಪಡೆಯು ಜಪಾನ್‌ನ ಒಕಿನಾವದಿಂದ ಪಿ-8ಎ ವಿಮಾನವೊಂದನ್ನು ಶೋಧಕ್ಕಾಗಿ ಕಳುಹಿಸಿದೆ.
ಪನಾಮದಲ್ಲಿ ನೋಂದಾವಣೆಯಾಗಿರುವ ತೈಲ ಟ್ಯಾಂಕರ್ ‘ಸಾಂಚಿ’ ಇರಾನ್‌ನಿಂದ ದಕ್ಷಿಣ ಕೊರಿಯಕ್ಕೆ ಸಾಗುತ್ತಿತ್ತು ಹಾಗೂ ಹಾಂಕಾಂಗ್‌ನಲ್ಲಿ ನೋಂದಾವಣೆಯಾಗಿರುವ ಸರಕು ಹಡಗು ಸಿಎಫ್ ಕ್ರಿಸ್ಟಲ್ ಅಮೆರಿಕದಿಂದ ಚೀನಾಕ್ಕೆ ದವಸ ಧಾನ್ಯಗಳನ್ನು ಹೊತ್ತೊಯ್ಯುತ್ತಿತ್ತು.
ಈ ಎರಡು ಹಡಗುಗಳು ಪೂರ್ವ ಚೀನಾ ಸಮುದ್ರದಲ್ಲಿ ಶಾಂಘೈ ತೀರದಿಂದ 257 ಕಿ.ಮೀ. ದೂರದಲ್ಲಿ ಪರಸ್ಪರ ಢಿಕ್ಕಿ ಹೊಡೆದಿದ್ದವು.







