ಅಮೆರಿಕದ ವಿರುದ್ಧ ಮುಸ್ಲಿಮ್ ದೇಶಗಳು ಒಂದಾಗಬೇಕು: ಇರಾನ್

ಟೆಹರಾನ್ (ಇರಾನ್), ಜ. 8: ಮುಸ್ಲಿಮರನ್ನು ವಿಭಜಿಸುವ ಅಮೆರಿಕದ ನೀತಿಯನ್ನು ವಿರೋಧಿಸಲು ನಿಕಟ ಸಹಕಾರ ಏರ್ಪಡಿಸುವಂತೆ ಇರಾನ್ ರವಿವಾರ ಮುಸ್ಲಿಮ್ ದೇಶಗಳನ್ನು ಒತ್ತಾಯಿಸಿದೆ.
‘‘ಇರಾನ್ ಮತ್ತು ಪಾಕಿಸ್ತಾನ ಸೇರಿದಂತೆ, ಮುಸ್ಲಿಮ್ ದೇಶಗಳ ಬಗ್ಗೆ ಅಮೆರಿಕ ಹೊಂದಿರುವ ಅಪ್ರಾಮಾಣಿಕ, ವಂಚಕ ಮತ್ತು ವಿಭಜನವಾದಿ ನೀತಿಯನ್ನು ಎದುರಿಸಲು ಮುಸ್ಲಿಮ್ ದೇಶಗಳು ತಮ್ಮ ನಡುವಿನ ಸಹಕಾರವನ್ನು ವೃದ್ಧಿಸುವ ಅವಶ್ಯಕತೆಯಿದೆ’’ ಎಂದು ಇರಾನ್‌ನ ಸುಪ್ರೀಂ ನ್ಯಾಶನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಅಲಿ ಶಂಖಾನಿ ಹೇಳಿರುವುದಾಗಿ ‘ಪ್ರೆಸ್ ಟಿವಿ’ ವರದಿ ಮಾಡಿದೆ.
ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಾಸಿರ್ ಖಾನ್ ಜಂಜುವ ಜೊತೆ ನಡೆಸಿದ ಮಾತುಕತೆಯ ವೇಳೆ ಶಂಖಾನಿ ಈ ಒತ್ತಾಯ ಮಾಡಿದ್ದಾರೆ.
ಭಯೋತ್ಪಾದಕರ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿರುವ ಪಾಕಿಸ್ತಾನದ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಅಮೆರಿಕ ಮುಂದಾಗಿರುವುದನ್ನು ಸ್ಮರಿಸಬಹುದಾಗಿದೆ.
Next Story





