ಜ.22 ರಿಂದ ರಾಗಿ ಖರೀದಿ ಕೇಂದ್ರ ಆರಂಭ: ಎನ್.ಮಂಜುಶ್ರೀ

ಮಂಡ್ಯ, ಜ.8: ಜಿಲ್ಲೆಯ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಸಕಲ ಸಿದ್ಧತೆ ಕೈಗೊಳ್ಳುವ ಮೂಲಕ ಜ.22 ರಿಂದ ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ನಡೆದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸುವ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜ.16 ರಿಂದ ಎಲ್ಲ ತಾಲೂಕುಗಳಲ್ಲಿ ರಾಗಿ ಖರೀದಿಸಲು ನೋಂದಣಿ ಕಾರ್ಯ ಆರಂಭಿಸಬೇಕೆಂದರು.
ರಾಗಿ ಖರೀದಿಗೆ ಫೆ.18 ಕೊನೆಯ ದಿನವಾಗಿದ್ದು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡಲು ಇಚ್ಚಿಸುವ ರೈತರಿಗೆ ರೈತ ಸಂಪರ್ಕ ಕೇಂದ್ರದ ಮೂಲಕ ಮಾಹಿತಿ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‍ಗಳನ್ನು ಅಂಟಿಸುವ ಜತೆಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಉಗ್ರಾಣ ನಿಗಮ ರಾಗಿ ಖರೀದಿ ಏಜೆನ್ಸಿಯಾಗಿದ್ದು, ಕ್ಚಿಂಟಾಲ್ ರಾಗಿಗೆ 2,300 ರೂ.ನಿಗದಿಪಡಿಸಿದೆ. ಖರೀದಿ ಕ್ರೇಂದ್ರಗಳಿಗೆ ಕೃಷಿ ಇಲಾಖೆಯು ಗ್ರೇಡರ್‍ಗಳನ್ನು ನೇಮಿಸಬೇಕು. ಖರೀದಿ ಏಜೆನ್ಸಿಯವರು ಖರೀದಿ ಕೇಂದ್ರಗಳ ಮುಂದೆ ಮಾಹಿತಿವುಳ್ಳ ಪೋಸ್ಟರ್‍ಗಳನ್ನು ಅಳವಡಿಸಬೇಕು ಹಾಗೂ ಸ್ವಚ್ಛತೆಯಿಂದ ಕೂಡಿರಬೇಕು ಎಂದು ಸೂಚಿಸಿದರು.
ಆರ್.ಟಿ.ಜಿ.ಎಸ್. ಮೂಲಕ ನೇರವಾಗಿ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕಾಗಿರುವುದರಿಂದ ಆಧಾರ್‍ಕಾರ್ಡ್, ಆರ್.ಟಿ.ಸಿ., ಪಾಸ್‍ಬುಕ್, ಬೆಳೆ ದೃಢೀಕರಣಪತ್ರಗಳನ್ನು ಒಳಗೊಂಡ ದಾಖಲಾತಿಗಳನ್ನು ಕಡ್ಡಾಯವಾಗಿ ನೀಡಲು ನೋಂದಾಣವಣೆ ವೇಳೆ ರೈತರಿಗೆ ಮಾಹಿತಿ ನೀಡಬೇಕು.
ಎರಡು ದಿನಕೊಮ್ಮೆ ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಖರೀದಿ ಕೇಂದ್ರ, ಗೋದಾಮುಗಳಿಗೆ ಭೇಟಿ ನೀಡಿ ಸರಕು ಪರೀಕ್ಷೆ ಮಾಡಿ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕಿ ಕುಮುದ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಕ ಸಿದ್ದಮಹಾದೇವಯ್ಯ, ಕೃಷಿ ಜಂಟಿ ನಿರ್ದೇಶಕಿ ರಾಜಾಸುಲೋಚನಾ ಮತ್ತು ಇತರೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







