ಉಚಿತ ತರಬೇತಿ ಶಿಬಿರಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜ.8: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವಕ-ಯುವತಿಯರಿಗಾಗಿ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ವಿವಿಧ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿ ಶಿಬಿರಗಳನ್ನು ಬೆಂಗಳೂರಿನ ಕೋರಮಂಗಲದಲ್ಲಿರುವ ರಾಜ್ಯ ಯುವ ಕೇಂದ್ರದ ಒಳಾಂಗಣ ಕ್ರೀಡಾಂಗಣ ಅಥವಾ ಕುಂಬಳಗೂಡು ಯುವಜನ ತರಬೇತಿ ಕೇಂದ್ರ ಹಾಗೂ ಇಲಾಖೆಯ ಅಧೀನದಡಿಯಲ್ಲಿನ ತರಬೇತಿ ಕೇಂದ್ರಗಳಲ್ಲಿ ನಡೆಯಲಿದೆ.
ತರಬೇತಿ ಶಿಬಿರದಲ್ಲಿ ಭಾಗವಹಿಸುವ ಯುವಕ-ಯುವತಿಯರಿಗೆ ಲಘು ಉಪಾಹಾರ ಮಾತ್ರ ನೀಡಲಾಗುತ್ತದೆ. ಈ ಶಿಬಿರದಲ್ಲಿ 15 ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಭಾಗವಹಿಸಬಹುದಿದ್ದು, 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, 100 ರೂ.ಗಳು ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೊರ ಜಿಲ್ಲೆಗಳಿಂದ ಆಗಮಿಸುವ ಶಿಬಿರಾರ್ಥಿಗಳಿಗೆ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಶಿಬಿರವು ಜ.16ರಿಂದ 21ರವರೆಗೆ ಟ್ಯಾಲಿ ತರಬೇತಿ, ಜ.18 ರಿಂದ 23 ರವರೆಗೆ ಡಿಜಿಟಲ್ ಮಾರ್ಕೇಟಿಂಗ್ ತರಬೇತಿ, ಜ.22 ರಿಂದ 27 ರವರೆಗೆ ಜಿಎಸ್‌ಟಿ ತರಬೇತಿ, ಜ. 24 ರಿಂದ 29 ರವರೆಗೆ ಫೋಟೋಗ್ರಫಿ ತರಬೇತಿ, ಜ.29 ರಿಂದ ಫೆ.7 ರವರೆಗೆ ಬ್ಯೂಟಿಷಿಯನ್ ತರಬೇತಿ, ಜ.30 ರಿಂದ ಫೆ.8 ರವರೆಗೆ ಆಟೋಮೊಬೈಲ್ ಟೆಕ್ನಿಷಿಯನ್ ತರಬೇತಿ, ಫೆ.7 ರಿಂದ ಫೆ.12 ರವರೆಗೆ ಬ್ಯಾಂಕಿಂಗ್ ತರಬೇತಿ, ಫೆ.14 ರಿಂದ ಫೆ.19 ರವರೆಗೆ ಬೇಕರಿ ಮತ್ತು ಕೇಕ್ ಕಲೆ ತರಬೇತಿ, ಫೆ.14 ರಿಂದ 23 ರವರೆಗೆ ಮೊಬೈಲ್ ದುರಸ್ತಿ ತರಬೇತಿ ಸೇರಿದಂತೆ ಫೆ.20 ರಿಂದ 25 ರವರೆಗೆ ಹಲವು ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ ಯುವಕ, ಯುವತಿಯರು ತಮ್ಮ ಆಧಾರ್ ಕಾರ್ಡ್, ಇತ್ತೀಚಿನ ಎರಡು ಭಾವಚಿತ್ರ ಮತ್ತು ಗರಿಷ್ಠ ವಿದ್ಯಾರ್ಹತೆಯ ಪ್ರಮಾಣ ಪತ್ರದ ಮೂಲ ದೃಢೀಕೃತ ನಕಲು ಪ್ರತಿಯೊಂದಿಗೆ ಉಪ ನಿರ್ದೇಶಕರು, ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ, ಬೆಂಗಳೂರು-01 ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 080-22214911 ಸಂಖ್ಯೆಯನ್ನು ಸಂಪರ್ಕಿಸಬುದಾಗಿದೆ ಎಂದು ಪ್ರಕಟನೆ ತಿಳಿಸಿದೆ.







