ಗಾಂಜಾ ಸಾಗಾಟ ಪ್ರಕರಣ: ಆರೋಪಿಗಳಿಗೆ ಶಿಕ್ಷೆ
ಮಂಗಳೂರು, ಜ.8: ಗಾಂಜಾ ಸಾಗಾಟ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರಿನ ನ್ಯಾಯಾಲಯ ಸೋಮವಾರ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.
ಬಿಹಾರದ ಮನೋಜ್ ಕುಮಾರ್ (35) ಮತ್ತು ಆಂಧ್ರದ ಟಿ.ಸಾಯಿ ಕುಮಾರ್ (19) ಶಿಕ್ಷೆಗೊಳಗಾದ ಅಪರಾಧಿಗಳು.
ಆರೋಪಿಗಳಿಗೆ 1ವರ್ಷ 6 ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಮಾದಕ ದ್ರವ್ಯ ಕಾಯ್ದೆಯಡಿಯ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಆರೋಪಿಗಳು ಬೆಂಗಳೂರಿನಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದು, 2017ರ 22ರಂದು ಅರ್ಕುಳ ಗ್ರಾಮದ ವಳಚ್ಚಿಲ್ ಪದವು ಮೈದಾನದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದರು. ಆರೋಪಿಗಳಿಂದ 2ಲಕ್ಷ ರೂ. ಮೌಲ್ಯದ 11.320ಕಿ.ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಮಾದಕ ದ್ರವ್ಯ ಕಾಯ್ದೆಯಡಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಬೀಳಗಿ ತೀರ್ಪು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 8 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಆರೋಪಿಗಳಿಗೆ ಮಾದಕ ದ್ರವ್ಯ ಕಾಯ್ದೆ ಕಲಂ 8(ಸಿ), 20(ಬಿ) ಬಿಯಡಿ 1 ವರ್ಷ 6 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 20ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 1 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.







