ಸುಂಟಿಕೊಪ್ಪ: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಬೈಕ್ ಜಾಥಾ

ಸುಂಟಿಕೊಪ್ಪ,ಜ.8: ಕುಶಾಲನಗರವನ್ನು ಮುಖ್ಯ ಕೇಂದ್ರವಾಗಿಸಿ ಕಾವೇರಿ ತಾಲೂಕು ರಚಿಸಬೇಕೆಂದು ಆಗ್ರಹಿಸಿ ಕಾವೇರಿ ತಾಲೂಕು ಗದ್ದೆಹಳ್ಳದಿಂದ ಸುಂಟಿಕೊಪ್ಪ ಹಾಗೂ ಕುಶಾಲನಗರದವರಗೆ ಬೈಕ್ ಜಾಥಾ ನಡೆಸಿ, ಕನ್ನಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಚಳುವಳಿ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಕಾವೇರಿ ತಾಲೂಕು ಹೋರಾಟ ಸದಸ್ಯ ಎಂ.ಎ.ಉಸ್ಮಾನ್, ಈ ಹೋರಾಟದಲ್ಲಿ ಕೇವಲ ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಆದರೆ ಕಾಫಿ ಬೆಳೆಗಾರರು, ಶ್ರೀಮಂತರು ಪಾಲ್ಗೊಳ್ಳದಿರುವುದು ವಿಷಾದನೀಯವಾದುದು. ತಾ.9 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೊಡಗಿಗೆ ಭೇಟಿ ನೀಡುವಾಗ ಅವರಿಗೆ ಮನವಿ ಆರ್ಪಿಸಿ ಕಾವೇರಿ ತಾಲೂಕು ನೀಡಬೇಕೆಂದು ಹಕ್ಕೊತ್ತಾಯ ಮಾಡಲಾಗುವುದು ಎಂದರು.
ಸುಂಟಿಕೊಪ್ಪ ಗ್ರಾ.ಪಂ.ಸದಸ್ಯ ಕೆ.ಇ.ಕರೀಂ ಮಾತನಾಡಿ 20 ವರ್ಷದಗಳಿಂದ ಕಾವೇರಿ ತಾಲೂಕಿಗಾಗಿ ಹೋರಾಟ ನಡೆಸಿದ್ದರೂ ಸಹ 50 ತಾಲೂಕು ರಚಿಸುವಾಗ,ನಮ್ಮ ತಾಲೂಕನ್ನು ಕೈ ಬಿಟ್ಟಿರುವುದು ಸರಿಯಲ್ಲ. ಮುಖ್ಯ ಮಂತ್ರಿಯವರು ಕೊಡಗಿಗೆ ಭೇಟಿ ಮಾಡುವಾಗ ಅವರಿಗೆ ಮನವಿ ಸಲ್ಲಿಸಿ ಕಾವೇರಿ ತಾಲೂಕು ಮಾಡಲು ಆಗ್ರಹಿಸುತ್ತೇವೆ. ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಯೂತ್ ಫೋರ್ ಜಸ್ಟೀಸ್ ವಾಟ್ಸ್ ಆಫ್ ಗ್ರೂಫ್‍ನ ಅಡ್ಮಿನ ಜೂನಾಸ್, ಯುವಕರ ಹಾದಿ ತಪ್ಪಿಸಲು ಯತ್ನಿಸಲಾಗುತ್ತಿದೆ. ಈ ಹೋರಾಟ ಕಾವೇರಿ ತಾಲೂಕು ರಚನೆ ಆಗುವವರೆಗೆ ನಿಲುವುದಿಲ್ಲ ಎಂದರು.
ಸುಂಟಿಕೊಪ ಕಾವೇರಿ ತಾಲೂಕು ಸ್ಥಾನೀಯ ಸಮಿತಿ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಕನ್ನಡ ವೃತ್ತದಲ್ಲಿ ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಉಪಾಧ್ಯಕ್ಷರಾದ ಪಿ.ಆರ್.ಸುಕುಮಾರ್, ಪಂಚಾಯತ್ ಸದಸ್ಯ ಶಾಹೀದ್, ಕಾವೇರಿ ತಾಲೂಕು ಹೋರಾಟ ಸ್ಥಾನೀಯ ಸಮಿತಿ ಉಪಾಧ್ಯಕ್ಷರಾದ ಅಣ್ಣಾಶರೀಫ್ ಕಾರ್ಯದರ್ಶಿ ಪಿ.ಆರ್.ಸುನಿಲ್‍ಕುಮಾರ್ ಮತ್ತಿತರರು ಇದ್ದರು.







