ನಾಣ್ಯದ ಗೊಂದಲ ನಿವಾರಿಸಿ
ಮಾನ್ಯರೇ,
ಹರಿದ, ತೇಪೆ ಹಾಕಿದ ನೋಟುಗಳನ್ನು ಹೆಚ್ಚಾಗಿ ಜನರು ಸ್ವೀಕರಿಸುವುದಿಲ್ಲ, ನಾಣ್ಯಗಳ ವಿಷಯಕ್ಕೆ ಬಂದರೆ ಚಲಾವಣೆಯಲ್ಲಿಲ್ಲದ ನಾಣ್ಯಗಳ ಹೊರತಾಗಿ ಉಳಿದೆಲ್ಲ ನಾಣ್ಯಗಳನ್ನೂ ಸ್ವೀಕರಿಸಲಾಗುತ್ತದೆ. ಆದರೆ ಹತ್ತು ರೂಪಾಯಿ ನಾಣ್ಯಕ್ಕೆ ಮಾತ್ರ ಈ ಮಾತು ಅನ್ವಯಿಸುವುದಿಲ್ಲ. ಸರಕಾರವು ಹತ್ತು ರೂಪಾಯಿ ನೋಟಿನ ಜೊತೆ ಹತ್ತು ರೂಪಾಯಿ ವೌಲ್ಯದ ನಾಣ್ಯಗಳನ್ನೂ ಪರಿಚಯಿಸಿದೆ. ಆದರೆ ಜನರೇಕೋ ಈ ಹತ್ತು ರೂಪಾಯಿ ನಾಣ್ಯಗಳನ್ನು ಕಂಡರೆ ದೆವ್ವ ಕಂಡಂತೆ ಬೆಚ್ಚಿ ಬೀಳುತ್ತಾರೆ. ಈ ಹತ್ತು ರೂಪಾಯಿ ನಾಣ್ಯಗಳನ್ನು ಬಹುತೇಕ ಯಾರು ಕೂಡಾ ತೆಗೆದುಕೊಳ್ಳುವುದಿಲ್ಲ. ಮುಖ್ಯವಾಗಿ ಬಸ್ ಕಂಡಕ್ಟರ್ಗಳು ಮತ್ತು ರಿಕ್ಷಾ ಚಾಲಕರು ಈ ನಾಣ್ಯವನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಇನ್ನು ಹೆಚ್ಚಿನ ವ್ಯಾಪಾರಿಗಳು ಕೂಡಾ ಹತ್ತು ರೂಪಾಯಿ ನಾಣ್ಯವನ್ನು ಕಂಡಾಗ ಮುಖ ಸಿಂಡರಿಸುತ್ತಾರೆ. ಈ ನಾಣ್ಯವನ್ನು ಯಾವುದೇ ಭಯವಿಲ್ಲದೆ ಸ್ವೀಕರಿಸಬಹುದು ಎಂದು ಬ್ಯಾಂಕ್ಗಳು ಎಷ್ಟು ಬಾರಿ ಹೇಳಿದರೂ ಜನರು ಕೇಳುವ ಸ್ಥಿತಿಯಲ್ಲಿಲ್ಲ. ಈ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುತ್ತದೆ ಎಂಬ ಸುಳ್ಳು ವದಂತಿಯೇ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ.
ಪ್ರಧಾನಿ ಮೋದಿ ರೂ. 500 ಮತ್ತು 1,000 ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇತರ ವಿವಿಧ ಮುಖಬೆಲೆಯ ನೋಟುಗಳನ್ನು ಅಮಾನ್ಯಮಾಡುವ ಸುಳ್ಳುಸುದ್ದಿಗಳು ದಿನಕ್ಕೊಂದರಂತೆ ಹರಡುತ್ತಿದೆ. ಅದರ ಭಾಗವೇ ಹತ್ತು ರೂ. ನಾಣ್ಯದ ಬಗೆಗಿರುವ ಗೊಂದಲ. ಈ ಗೊಂದಲದಿಂದಾಗಿ ಜನಸಾಮಾನ್ಯರು ಪರದಾಡುವಂತಾಗಿದೆ. ಬಹಳಷ್ಟು ಜನರಲ್ಲಿ ಈ ನಾಣ್ಯಗಳು ಅಧಿಕ ಸಂಖ್ಯೆಯಲ್ಲಿ ಶೇಖರಣೆಯಾಗಿದೆ ಅದಕ್ಕೆ ಕಾರಣ ಯಾರೂ ಈ ನಾಣ್ಯವನ್ನು ಸ್ವೀಕರಿಸದಿರುವುದು. ಸರಕಾರವು ಕೂಡಲೇ ಈ ವಿಷಯದಲ್ಲಿ ಸ್ಪಷ್ಟೀಕರಣವನ್ನು ನೀಡುವ ಅಗತ್ಯವಿದೆ. ಹತ್ತು ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಅಮಾನ್ಯಗೊಳಿಸಲಾಗಿಲ್ಲ. ಹಾಗಾಗಿ ಅದನ್ನು ಎಲ್ಲರೂ ಯಾವುದೇ ಅಳುಕಿಲ್ಲದೆ ಸ್ವೀಕರಿಸಬೇಕು ಎಂದು ಸರಕಾರ ಘೋಷಿಸಬೇಕು. ಆ ಮೂಲಕ ಜನರಲ್ಲಿ ಈ ನಾಣ್ಯದ ಬಗ್ಗೆ ನಂಬಿಕೆಯನ್ನು ಮೂಡಿಸಬೇಕು.