3.21 ಕೋಟಿ ರೂ.ಮೌಲ್ಯದ ವಿದೇಶಿ ಕರೆನ್ಸಿ ಸಾಗಾಟ; ಜೆಟ್ ಏರ್ ವೇಸ್ ನ ಮಹಿಳಾ ಸಿಬ್ಬಂದಿ ಸೆರೆ

ಹೊಸದಿಲ್ಲಿ, ಜ.9: ಹಾಂಕಾಂಗ್ ಗೆ 3.21 ಕೋಟಿ ರೂ.ಮೌಲ್ಯದ 4,80,200 ಯುಎಸ್ ಡಾಲರ್ ನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜೆಟ್ ಏರ್ ವೇಸ್ ನ ಮಹಿಳಾ ಫ್ಲೈಟ್ ಅಟೆಂಡೆಂಟ್ ಒಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿ.ಆರ್.ಐ.) ಅಧಿಕಾರಿಗಳು ಬಂಧಿಸಿದ್ದಾರೆ.
ವಿಮಾನದಲ್ಲಿ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತ ವಿಮಾನ ಸಿಬ್ಬಂದಿಯ ಹೆಸರು ಗೊತ್ತಾಗಿಲ್ಲ. ಆಕೆ ವಿವೇಕ್ ವಿಹಾರ್ ನ ನಿವಾಸಿ ಅಮಿತ್ ಮಲ್ಹೋತ್ರಾ ಎಂಬವರಿಗೆ ಸೇರಿದ ಹಣವನ್ನು ಸಾಗಾಟ ಮಾಡುವ ದಂಧೆಯಲ್ಲಿ ತೊಡಗಿದ್ದಳು ಎಂದು ತಿಳಿದು ಬಂದಿದೆ.
ಅಮಿತ್ ಮಲ್ಹೋತ್ರಾ ಕೆಲವು ಉದ್ಯಮಿಗಳಿಂದ ಹಣ ಪಡೆದು ವಿಮಾನಗಳ ಸಿಬ್ಬಂದಿಗಳ ಮೂಲಕ ಹೊರದೇಶಕ್ಕೆ ಸಾಗಿಸುತ್ತಿದ್ದರು ಎಂದು ಗೊತ್ತಾಗಿದೆ.
ಈ ಹಣ ಹೊರದೇಶಗಳಿಂದ ಚಿನ್ನ ಖರೀದಿಗಾಗಿ ರವಾನೆಯಾಗುತ್ತಿತ್ತು ಎನ್ನಲಾಗಿದೆ
ಸುಮಾರು ಒಂದು ವರ್ಷದಿಂದ ಈ ದಂಧೆಯಲ್ಲಿ ಅಮಿತ್ ತೊಡಗಿರುವುದಾಗಿ ತಿಳಿದು ಬಂದಿದೆ.ಈತನನ್ನು ಡಿಆರ್ ಐ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.