ಈಶ್ವರಪ್ಪ ಹುಚ್ಚನಂತೆ ಮಾತನಾಡುವುದು ನಿಲ್ಲಿಸಲಿ: ಕಾಗೋಡು ತಿಮ್ಮಪ್ಪ

ಶಿವಮೊಗ್ಗ, ಜ.9: 'ಹುಚ್ಚನ ಕೈಯಲ್ಲಿ ಆಡಳಿತ ಕೊಟ್ಟಂತಾಗಿದೆ' ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಟೀಕಾಪ್ರಹಾರ ನಡೆಸಿದ್ದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ದ ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ ನಡೆಸಿದ್ದಾರೆ. ಹುಚ್ಚನ ರೀತಿ ಮಾತನಾಡದಂತೆ ತಾಕೀತು ಮಾಡಿದ್ದಾರೆ.
'ಕೆ.ಎಸ್.ಈಶ್ವರಪ್ಪರವರು ಮೊದಲು ಹುಚ್ಚನಂತೆ ಮಾತನಾಡುವುದು ನಿಲ್ಲಿಸಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು, ಬಾಯಿಗೆ ಬಂದಂತೆ ಮಾತನಾಡುವುದು ಶೋಭೆ ತರುವುದಿಲ್ಲ. ಇತಿಮಿತಿ ಅರಿತು ಮಾತನಾಡಬೇಕು' ಎಂದು ಕಾಗೋಡು ತಿಮ್ಮಪ್ಪ ಕಿಡಿಕಾರಿದ್ದಾರೆ. ಮಂಗಳವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಾಧನಾ ಸಮಾವೇಶವನ್ನು ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಬಿಜೆಪಿ ಮುಖಂಡರ ಆರೋಪ ಮತ್ತು ಸಮಾವೇಶಕ್ಕೆ ಮಾಡಲಾದ ಖರ್ಚುವೆಚ್ಚದ ವಿವರ ನೀಡಲಿ ಎಂಬ ಬಿಜೆಪಿ ಮುಖಂಡರ ಒತ್ತಾಯಕ್ಕೆ ಪ್ರಕ್ರಿಯಿಸಿದ ಅವರು,ಸಮಾವೇಶಕ್ಕೆ ಆದ ಖರ್ಚುವೆಚ್ಚದ ಲೆಕ್ಕ ಬೇಕಿದ್ದರೆ ಜಿಲ್ಲಾಡಳಿತವನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲಿ. ಎಲ್ಲಾ ಮಾಹಿತಿಯೂ ಅವರಿಗೆ ದೊರಕುತ್ತದೆ ಎಂದರು.
ಸಾರ್ವಜನಿಕರ ಹಣ ಹೇಗೆ ಬಳಸಬೇಕು? ಎಲ್ಲಿ ಬಳಸಬೇಕು ಎಂಬುವುದು ನಮಗೆ ಗೊತ್ತಿದೆ. ಸಾಧನಾ ಸಮಾವೇಶದಲ್ಲಿ ಅಧಿಕಾರಿಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುವುದರಲ್ಲಿ ಯಾವುದೇ ಹುರುಳಿಲ್ಲ. ಬಿಜೆಪಿಯವರು ಪ್ರತಿಭಟನೆ ನಡೆಸುತ್ತಾರೆ ಎಂದರೆ ಅದು ಅವರ ಹಣೆಬರಹ. ಇದಕ್ಕೆ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ ಎಂದು ಕಾಗೋಡು ತಿಮ್ಮಪ್ಪ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.







