ಹೈ-ಕದಲ್ಲಿ ಧರ್ಮಸಿಂಗ್-ಖರ್ಗೆ ಮಕ್ಕಳಿಗೆ ಆದ್ಯತೆ: ವೈಜನಾಥ್ ಪಾಟೀಲ್
ಬೆಂಗಳೂರು, ಜ.9: ಹೈ-ಕರ್ನಾಟಕ ಭಾಗದಲ್ಲಿ ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಮಕ್ಕಳಿಗೆ ಅವಕಾಶ ಸಿಗುತ್ತಲಿವೆ. ಆದರೆ, ನನ್ನ ಮಗನಿಗೆ ಪದವೀಧರ ಕ್ಷೇತ್ರದಿಂದ ಟಿಕೆಟ್ ವಂಚಿಸಿದ್ದಾರೆ ಎಂದು ಮಾಜಿ ಸಚಿವ ವೈಜನಾಥ್ ಪಾಟೀಲ್ ಆರೋಪಿಸಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವತೋಮುಖ ಅಭಿವೃದ್ಧಿಯಾಗಬೇಕಿದ್ದ ಹೈ-ಕರ್ನಾಟಕದಲ್ಲಿ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಅಭಿವೃದ್ಧಿ ಮಾತ್ರ ಆಗುತ್ತಿದೆ. ಈ ಬಗ್ಗೆ ಯಾರು ಪ್ರಶ್ನಿಸುವವರೇ ಇಲ್ಲವಾಗಿದ್ದಾರೆ ಎಂದು ಕಿಡಿಕಾರಿದರು.
ನನ್ನ ಮಗ ವಿಕ್ರಮ್ ಪಾಟೀಲ್ ಪದವೀಧರ ಕ್ಷೇತ್ರದ ಆಕಾಂಕ್ಷಿ. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಟಿಕೆಟ್ ನೀಡಲು ಭರವಸೆ ನೀಡಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಮಗನಿಗೆ ಟಿಕೆಟ್ ನೀಡದೆ ಮೋಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಸದ್ಯದ ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಇಲ್ಲವಾಗಿದೆ. ಇದು ಸರಿಯಾಗಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲವೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಮ್ಮ ಅಧಿಕಾರವನ್ನು ತ್ಯಜಿಸಬೇಕು. ಆಗ ಎಲ್ಲವೂ ಸರಿ ಹೋಗಲಿದೆ ಎಂದು ಅವರು ಹೇಳಿದರು.





