ಕುಮಾರಸ್ವಾಮಿ ಜೊತೆ ಬ್ರಿಟಿಷ್ ಹೈ ಕಮೀಷನರ್ ಚರ್ಚೆ

ಬೆಂಗಳೂರು, ಜ.9: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜತೆ ಭಾರತದಲ್ಲಿನ ಬ್ರಿಟೀಷ್ ಡೆಪ್ಯೂಟಿ ಹೈ ಕಮೀಷನರ್ ಡಾ.ಅಲೆಗ್ಸಾಂಡರ್ ಇವಾನ್ಸ್ ಹಾಗೂ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಅಲೆಕ್ಸಾ ಕ್ಯಾಮರೂನ್ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.
ಜೆ.ಪಿ.ನಗರದಲ್ಲಿರುವ ಕುಮಾರಸ್ವಾಮಿ ಅವರ ನಿವಾಸದಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಬ್ರಿಟಿಷ್ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.
ನಮ್ಮ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರಿಗೆ ಬಹಳ ಕುತೂಹಲವಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಯಾವ ಗುರಿಯನ್ನಿಟ್ಟುಕೊಂಡು ಮುಂದುವರೆಯುತ್ತಿದೆ. ಅಲ್ಲದೆ, ನಮ್ಮ ನಿಲುವಿನ ಬಗ್ಗೆ ಡಾ.ಅಲೆಗ್ಸಾಂಡರ್ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು
ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದುವುದು ಅವರ ಇಚ್ಛೆಯಾಗಿದೆ. ಜತೆಗೆ ರಾಜ್ಯ ರಾಜಕಾರಣದ ವಿದ್ಯಾಮಾನಗಳ ಬಗ್ಗೆ ಮಾಹಿತಿ ಪಡೆಯುವ ಉದ್ದೇಶವನ್ನು ಈ ಅಧಿಕಾರಿಗಳು ಹೊಂದಿದ್ದು, ನನ್ನೊಂದಿಗೆ ಈ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ ಎಂದು ಕುಮಾರಸ್ವಾಮಿ ಸ್ಪಷ್ಟಣೆ ನೀಡಿದರು.





