ಅಭಿವೃದ್ಧಿಯನ್ನು ಸಹಿಸದವರಿಂದ ಅಪಪ್ರಚಾರ: ಶಾಸಕ ಮುನಿರತ್ನ
ಬೆಂಗಳೂರು, ಜ.9: ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದವರು ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪಿಸಿದ್ದಾರೆ.
ಇಲ್ಲಿನ ಸಪ್ತಗಿರಿ ಬಡಾವಣೆಯಲ್ಲಿ ಡಾಂಬರೀಕರಣ, ಒಳಚರಂಡಿ, ಉದ್ಯಾನವನ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಸರ್ವ ರೀತಿಯಲ್ಲಿ ತೊಡಗಿರುವ ನನ್ನ ವಿರುದ್ಧ ಕೆಲ ಬಿಜೆಪಿ ಮಂದಿ ವಿನಾಕಾರಣ ಅಪ್ರಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಕ್ಷೇತ್ರದ ಜನತೆಯೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಬಡವರಿಗೆ ನಿವೇಶನ, ಬಡ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಸೌಲಭ್ಯ, ಆರೋಗ್ಯ ಸೇವೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ನೀಡುತ್ತಿದ್ದೇನೆ. ಇಂತಹ ಕಾರ್ಯಗಳನ್ನು ಮಾಡುವುದಕ್ಕಾಗಿಯೇ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತಹ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಪ್ತಗಿರಿ ಬಡಾವಣೆಯ ಅಧ್ಯಕ್ಷ ವಿ.ಸಿ.ಚಂದ್ರು ಮಾತನಾಡಿ, ರಾಜರಾಜೇಶ್ವರಿ ನಗರದಲ್ಲಿ ಬರುವ 16 ಉದ್ಯಾನವನದ ಪುನರ್ ಅಭಿವೃದ್ಧಿ, ಜಿಮ್ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವು ಕಡೆ ಯೋಗ ಕೇಂದ್ರದ ಕಟ್ಟಡ, ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.







