ಸ್ನೇಹಿತನ ಬರ್ಬರ ಹತ್ಯೆ: ಆರೋಪಿಯ ಬಂಧನ

ಶಿವಮೊಗ್ಗ, ಜ. 9: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಹೊರವಲಯ ರಾಗಿಗುಡ್ಡ ಬಡಾವಣೆಯ ಮಲ್ಲಿಕಾರ್ಜುನ ನಗರದ ಪಾಪ್ಯುಲರ್ ರೈಸ್‍ಮಿಲ್ ಸಮೀಪ ಸೋಮವಾರ ರಾತ್ರಿ ನಡೆದಿದೆ.
ಹೊನ್ನಾಳ್ಳಿ ರಸ್ತೆಯ ಫ್ಲೈ ಓವರ್ ಸಮೀಪದ ಚೌಡೇಶ್ವರಿ ಕಾಲೋನಿಯ ನಿವಾಸಿ ಮಂಜುನಾಥ್ (33) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹತ್ಯೆ ನಡೆಸಿದ ಆರೋಪದ ಮೇರೆಗೆ ಆತನ ಸ್ನೇಹಿತ ಸತ್ತಾರ್ ಸಾಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಪೈಟಿಂಗ್ ಕೆಲಸ ಮಾಡುತ್ತಿದ್ದ ಕೊಲೆಗೀಡಾದ ಮಂಜುನಾಥ್ ಹಾಗೂ ವೆಲ್ಡಿಂಗ್ ಕೆಲಸ ಮಾಡುವ ಆರೋಪಿ ಸತ್ತಾರ್ ಸಾಬ್ ಕಳೆದ ಕೆಲ ವರ್ಷಗಳಿಂದ ಸ್ನೇಹಿತರಾಗಿದ್ದರು. ಇಬ್ಬರು ಮದ್ಯವ್ಯಸನಿಗಳಾಗಿದ್ದರು. ಸೋಮವಾರ ರಾತ್ರಿ ಕೂಡ ಜೊತೆಯಾಗಿಯೇ ಮದ್ಯ ಸೇವನೆ ಮಾಡಿದ್ದಾರೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದು ಗಲಾಟೆಯಾಗಿದೆ. ಇದು ವಿಕೋಪಕ್ಕೆ ತಿರುಗಿ ಆರೋಪಿ ಸತ್ತಾರ್ ಸಾಬ್ ಮಂಜುನಾಥನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದ. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಸ್ಥಳದಲ್ಲಿಯೇ ಅಸುನೀಗಿದ್ದ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ.







