ಸಮಾನತೆ ಬರಿ ಮಾತಾಗಬಾರದು: ವಿದ್ಯಾಶಂಕರ್

ಬೆಂಗಳೂರು, ಜ.9: ಸಂವಿಧಾನದಲ್ಲಿ ಸಮಾನತೆ ಕಲ್ಪನೆ, ವ್ಯಕ್ತಿಗತ ಹಕ್ಕುಗಳ ಬಗ್ಗೆ ಮಾತನಾಡುವ ನಾವು ಕಾರ್ಯಗತಗೊಳಿಸುವುದರಲ್ಲಿ ಸೋತಿದ್ದೇವೆ ಎಂದು ಚಲನಚಿತ್ರ ತಜ್ಞ ವಿದ್ಯಾಶಂಕರ್ ಅಭಿಪ್ರಾಯಪಟ್ಟರು.
ಮಂಗಳವಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಸಮಾಜ ಕಲ್ಯಾಣ ಇಲಾಖೆ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆಯೋಜಿಸಿದ್ದ, ಎಸ್ಸಿ-ಎಸ್ಟಿ ಯುವಕ, ಯುವತಿಯರಿಗೆ ಚಲನಚಿತ್ರ ಮತ್ತು ಸಾಕ್ಷಚಿತ್ರ ನಿರ್ಮಾಣದ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಸಾಮಾಜಿಕ ವಿಭಜನೆಗಳಿಂದ ವಸಾಹತುಶಾಹಿ ಕಾಲಕ್ಕೆ ಮರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಬೇರೆಯವರು ಆಕ್ರಮಣ ಮಾಡುವ ಮಟ್ಟಕ್ಕೆ ಸೋತಿದ್ದೇವೆ. ನಮ್ಮಲ್ಲಿರುವ ಎಲ್ಲ ಸಂಪತ್ತು, ಮಾನವ ಕೌಶಲಗಳಲ್ಲಿ ಸಮಾನತೆ ಸಾಧಿಸದಿದ್ದಲ್ಲಿ ಸಮಾನತೆ ಕಲ್ಪನೆ ಮಾತಾಗಿಯೆ ಉಳಿಯುತ್ತದೆ ಎಂದರು.
ಮುದ್ರಣ ಮಾಧ್ಯಮದ ನಂತರ ಬಂದ ಚಲನಚಿತ್ರ ಹಾಗೂ ದೃಶ್ಯ ಮಾಧ್ಯಮ ಆಧುನಿಕ ತಂತ್ರಜ್ಞಾನದ ಜಗತ್ತನ್ನು ಆಳುತ್ತಿವೆ. ಕಳೆದ 25 ವರ್ಷಗಳ ಅಂತರದಲ್ಲಿ ಬಂದ ಮೊಬೈಲ್, ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳೆಂಬ ಹೊಸಮಾಧ್ಯಮ ಸೃಷ್ಟಿಸುತ್ತಿರುವ ಹೊಸ ಜಗತ್ತು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಗಮನಿಸಬೇಕಿದೆ ಎಂದು ನುಡಿದರು.
ಮಾಹಿತಿ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ, ಸಿನಿಮಾ ತಂತ್ರಜ್ಞಾನಗಳಲ್ಲಿ ಸಮಾನತೆಯ ಕಲ್ಪನೆ ಅಗತ್ಯವಿದೆ. ಅಸಮಾನತೆ ನಿವಾರಿಸುವ ನಿಟ್ಟಿನಲ್ಲಿ ತರಬೇತಿ ಕೌಶಲದ ಶಿಬಿರಗಳು ಪ್ರಾಮುಖ್ಯತೆ ವಹಿಸುತ್ತವೆ ಎಂದ ಅವರು, ಹಿಂದುಳಿದ ಜನಾಂಗದವರು ಆಧುನಿಕ ತಂತ್ರಜ್ಞಾನವನ್ನು ಕಲಿಯಬೇಕಿದೆ. ಕೌಶಲವನ್ನು ಸಮಾನವಾಗಿ ಹಂಚದಿದ್ದರೆ ಸಮಾನತೆಯ ಕಲ್ಪನೆಗೆ ಅರ್ಥವಿರುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಮಾತನಾಡಿ, ಹಿಂದುಳಿದ ವರ್ಗಗಳ ಮತ್ತು ಸಾಮಾಜಿಕ ನ್ಯಾಯ ಬದ್ಧತೆ ಪ್ರದರ್ಶಿಸುವ ನಿಟ್ಟಿನಲ್ಲಿ ಪ್ರತ್ಯೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಸಿನಿಮಾ ಆಸಕ್ತಿ ಇರುವ ಎಸ್ಸಿ-ಎಸ್ಟಿ ಸಮುದಾಯದವರಿಗೆ ಅಗತ್ಯ ಮಾರ್ಗದರ್ಶನ ಕೊರತೆಯಿಂದ ಸಿನಿಮಾ ಕಲಿಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿಭೆಯನ್ನು ನಟನೆಗಷ್ಟೇ ಕೇಂದ್ರೀಕರಿಸಿಕೊಳ್ಳದೆ ಚಲನಚಿತ್ರ ತಯಾರಿಕೆಯ 22 ವಿಭಾಗಗಳಲ್ಲಿ ಸೃಜನಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಸಲಹೆ ಮಾಡಿದರು.
ಲೇಖಕ ರಾಜಪ್ಪ ದಳವಾಯಿ ಮಾತನಾಡಿ, ಸಂಪನ್ಮೂಲ ಕ್ರೋಡೀಕರಿಸಿಕೊಂಡಿರುವ ಉನ್ನತ ಸಮುದಾಯ ಜಾತೀಯತೆ ಮಾಡುತ್ತಿವೆ. ಪ್ರತಿಭೆ ಗುರುತಿಸಿ ಅವಕಾಶ ಕೊಡುವವರ ಸಂಖ್ಯೆ ತುಂಬಾ ವಿರಳ ಎಂದ ಅವರು, ಸಿನಿಮಾ ಇದೆ ಆದರೆ ಸಿನಿಮಾ ಶಿಕ್ಷಣವಿಲ್ಲ. ಎಲ್ಲರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯಗಾರ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಸರಕಾರ ಆಯೋಜಿಸಿರುವ ಕಾರ್ಯಾಗಾರವನ್ನು ಸಮರ್ಥವಾಗಿ ಬಳಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ಜಾತಿ ಮೀರಿ ಅವಕಾಶ ಕೊಡುವಂತಾಗಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷಣರೆಡ್ಡಿ, ಕವಯಿತ್ರಿ ಸುಕನ್ಯಾ ಮಾರುತಿ ಸೇರಿ ಪ್ರಮುಖರಿದ್ದರು.
‘ಬಹಳಷ್ಟು ಕ್ಷೇತ್ರಗಳಲ್ಲಿ ಕೆಳ ಸಮುದಾಯದವರಿಗೆ ಇಂದಿಗೂ ಪ್ರವೇಶ ಸಿಗುತ್ತಿಲ್ಲ. ಜಾತಿ ಸಾಮಾಜಿಕ ಶಾಪವಾಗಿ ಕಾಡುತ್ತಿದೆ. ಸಮಾಜದಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವ ಪರಿಪಾಠ ಮೂಡಬೇಕಿದೆ ’
-ರಾಜಪ್ಪ ದಳವಾಯಿ, ಲೇಖಕ







