4 ವರ್ಷ ಕಳೆದರೂ ಮೃತ ಕಾರ್ಮಿಕನ ಕುಟುಂಬಕ್ಕೆ ಸಿಗದ ಪರಿಹಾರ

ಉಡುಪಿ, ಜ.9: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಮೃತಪಟ್ಟ ಪಡುಬಿದ್ರೆ ಸಮೀಪದ ಕಂಚಿನಡ್ಕದ ಕೂಲಿ ಕಾರ್ಮಿಕ ಶ್ರೀಕಾಂತ್(25) ಕುಟುಂಬಕ್ಕೆ ನಾಲ್ಕು ವರ್ಷ ಕಳೆದರೂ ನಯಾ ಪೈಸೆಯ ಪರಿಹಾರ ಸಿಕ್ಕಿಲ್ಲ. ಮಾಹಿತಿ ಕೊರತೆ ಯಿಂದ ಪರಿಹಾರ ಹಣದಿಂದ ವಂಚಿತರಾಗಿರುವ ಬಡ ಕುಟುಂಬದ ನೆರವಿಗೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಮುಂದಾಗಿದೆ.
ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಈ ಕುರಿತು ಮಾಹಿತಿ ನೀಡಿದರು.
ಕಟ್ಟಡ ದುರಂತ: 2013ರ ಜೂ.18ರಂದು ಶಿರ್ವದ ಪಂಜಿಮಾರು ಎಂಬಲ್ಲಿ ಗುತ್ತಿಗೆದಾರ ಕೇಶವ ಸಫಲಿಗರ ಮೇಲ್ವಿಚಾರಣೆಯಲ್ಲಿ ಕಟ್ಟಡ ಕೆಲಸ ನಿರ್ವಹಿಸುತ್ತಿದ್ದ ಪಡುಬಿದ್ರೆ ಸಮೀಪದ ಕಂಚಿನಡ್ಕದ ಕೂಲಿ ಕಾರ್ಮಿಕ ಶ್ರೀಕಾಂತ್(25) ತಲೆಯ ಮೇಲೆ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಮನೆಯ ಆಧಾರಸ್ತಂಭವನ್ನು ಕಳೆದುಕೊಂಡ ಕುಟುಂಬ ವಕೀಲರೊಬ್ಬರ ಸೂಚನೆಯಂತೆ ಪರಿಹಾರಕ್ಕಾಗಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಪರಿಹಾರ ಮೊತ್ತಕ್ಕಾಗಿ ಅರ್ಜಿ ಸಲ್ಲಿಸಿತ್ತು. ಪರಿಹಾರ ಪಡೆಯಲು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕೆಂಬ ಕಾರ್ಮಿಕ ಅಧಿಕಾರಿಗಳ ಸಲಹೆಯಂತೆ ಉಡುಪಿಯ ನ್ಯಾಯಾಲಯದಲ್ಲಿ ಭಾರತೀಯ ದಂಡ ಸಂಹಿತೆಯ 304ನೇ ವಿಧಿಯ ಪ್ರಕಾರ ಪ್ರಕರಣ ದಾಖಲಿಸಲಾಯಿತು.
ಪ್ರತಿಷ್ಠಾನಕ್ಕೆ ದೂರು: ಶ್ರಿಕಾಂತ್ ಮೃತಪಟ್ಟು ನಾಲ್ಕು ವರ್ಷಗಳು ಕಳೆದರೂ ಪರಿಹಾರ ಸಿಗದಿದ್ದಾಗ ಮತ್ತು ದಾವೆಗಳ ಕುರಿತು ಯಾವುದೇ ಮಾಹಿತಿ ಸಿಗದಿ ದ್ದಾಗ ಮೃತರ ತಾಯಿ ಅಪ್ಪಿ, ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನ ವನ್ನು ಸಂಪರ್ಕಿಸಿ ಮಾರ್ಗದರ್ಶನ ಯಾಚಿಸಿದರು.
2017ರ ಆಗಸ್ಟ್ ತಿಂಗಳಲ್ಲಿ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿ ವಿಚಾರಿಸಿದಾಗ ಗುತ್ತಿಗೆದಾರರ ವಿರುದ್ಧ ಕಾರ್ಮಿಕ ನಷ್ಟ ಪರಿ ಹಾರ ಕಾಯಿದೆಯ ಅಡಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂತು. ಗುತ್ತಿಗೆದಾರ ಕೇಶವ ಸಫಲಿಗರು ಕಾರ್ಮಿಕ ಇಲಾಖೆಯೊಂದಿಗೆ ತಮ್ಮ ಹೆಸರನ್ನು ನೊಂದಾವಣೆ ಮಾಡಿಕೊಂಡಿಲ್ಲ ಎಂಬುದು ತಿಳಿಯಿತು.
ಉಡುಪಿಯ ನ್ಯಾಯಾಲಯದಲ್ಲಿ ವಿಚಾರಿಸಿದಾಗ ಗುತ್ತಿಗೆದಾರರಿಂದ ನಿರ್ಲಕ್ಷ ನಡೆದಿದೆ ಎಂಬುದನ್ನೂ ಸಾಬೀತು ಪಡಿಸಲು ಪ್ರಾಸಿಕ್ಯೂಶನ್ ವಿಫಲ ವಾಗಿದೆ ಎಂಬ ಕಾರಣ ನೀಡಿ 2015ರ ಆಗಸ್ಟ್ ತಿಂಗಳಲ್ಲೇ ನ್ಯಾಯಾಲಯವು ಆಪಾದಿತರನ್ನು ಖುಲಾಸೆ ಮಾಡಿರುವ ವಿಚಾರ ತಿಳಿದು ಬಂತು ಎಂದು ಡಾ. ರವೀಂದ್ರನಾಥ ಶಾನುಭಾಗ್ ಹೇಳಿದರು.
ಮಾಹಿತಿ ಕೊರತೆ: ನಿರ್ಮಾಣ ಹಂತದ ಕಟ್ಟಡ ಅಪಘಾತದಲ್ಲಿ ಮೃತ ಪಟ್ಟ ಕಾರ್ಮಿಕ ಕುಟುಂಬಕ್ಕೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 2 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಇದಕ್ಕೆ ಕಟ್ಟಡ ಗುತ್ತಿಗೆದಾರರು ತಮ್ಮ ಅಧೀನ ದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಹೆಸರನ್ನು ನಮೂದಿಸಿ ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ನೊಂದಾವಣಿ ಮಾಡಬೇಕು. ಆದರೆ ಈ ಪ್ರಕರಣದಲ್ಲಿ ಗುತ್ತಿಗೆ ದಾರರು ಇಲಾಖೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿುೀ ಇಲ್ಲ ಎಂದು ಶಾನುಭಾಗ್ ತಿಳಿಸಿದರು.
ಒಂದು ವೇಳೆ ಹೆಸರು ನೊಂದಾಯಿಸದಿದ್ದರೂ ಇಂತಹ ಪ್ರಕರಣಗಳಲ್ಲಿ ಇಲಾಖೆಗೆ ಅರ್ಜಿ ಹಾಕಿದಲ್ಲಿ ಎಕ್ಸಗ್ರೇಸಿಯ 50,000 ರೂ. ಪರಿಹಾರವನ್ನು ಪಡೆಯಬಹುದು. ಈ ಬಗ್ಗೆ ವಕೀಲರು ಅರ್ಜಿಯನ್ನು ಸಹ ತಯಾರಿಸಿ ತಾಯಿ ಅಪ್ಪಿಯಿಂದ ಸಹಿ ಪಡೆದಿದ್ದರು. ಆದರೆ ಅದನ್ನು ಇಲಾಖೆಗೆ ಸಲ್ಲಿಸಿಯೇ ಇಲ್ಲ. ಒಟ್ಟಾರೆ ಕಟ್ಟಡ ಕಾರ್ಮಿಕ ಶ್ರೀಕಾಂತ್ ಕುಟುಂಬಕ್ಕೆ ಈವರೆಗೂ ಒಂದು ರೂ. ಪರಿಹಾರವೂ ಸಿಕ್ಕಿಲ್ಲ. ನ್ಯಾಯಾಲಯ ಹಾಗೂ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಿ ಪರಿಹಾರ ಪಡೆಯಲು ಪ್ರತಿಷ್ಠಾನದ ಕಾರ್ಯಕರ್ತರು ಪ್ರಯತ್ನಿಸು ತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೃತ ಕಾರ್ಮಿಕನ ತಾಯಿ ಅಪ್ಪಿ, ಪತ್ನಿ ಮೋನಿಕಾ, ಸಹೋದರಿ ಮಾಲತಿ, ನಿವೃತ್ತ ತಹಶೀಲ್ದಾರ್ ಮುರಳೀಧರ್ ಉಪಸ್ಥಿತರಿದ್ದರು.







