ಧನ್ಯಶ್ರೀ ಆತ್ಮಹತ್ಯೆ ಪ್ರಕರಣ: ಎಫ್ಐಆರ್ ನಲ್ಲಿ ಇರುವುದೇನು?

ಮೂಡಿಗೆರೆ, ಜ.9: ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಸಂಬಂಧ ಆಕೆಯ ತಾಯಿ ಸರಸ್ವತಿ ನೀಡಿರುವ ದೂರು ಆಧರಿಸಿ ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ಸಂತೋಷ್ ಮತ್ತಿತರರ ವಿರುದ್ಧ ಕಲಂ 306ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ಹೀಗಿದೆ….
ಜ.4ರಂದು ಧನ್ಯಶ್ರೀ ಮೊಬೈಲ್ ಗೆ ಯಾರೋ ಕರೆ ಮಾಡಿ ವಾಟ್ಸಾಪ್‍ನಲ್ಲಿ ಫೋಟೋ ಹಾಕಿದ ವಿಚಾರವಾಗಿ ಮಾತನಾಡಿ, ಹೆದರಿಸಿದ್ದಾನೆ. ಅಲ್ಲದೆ ಬುರ್ಖಾ ರೀತಿ ಮುಖಕ್ಕೆ ಬಟ್ಟೆ ಹಾಕಿರುವ ಫೋಟೋವನ್ನು ವಾಟ್ಸಾಪ್‍ಗೆ ಹಾಕಿ "ನೀನು ಮುಸ್ಲಿಮರಿಗೆ ಸಪೋರ್ಟ್ ಮಾಡುತೀಯಾ, ನಿನ್ನ ಮರ್ಯಾದೆ ತೆಗೆಯುತ್ತೇನೆ. ನಿನಗೆ ಬಿಡುವುದಿಲ್ಲ" ಎಂದು ಧನ್ಯಶ್ರೀ ಗೆ ಹೆದರಿಸಿದ ವಿಚಾರವನ್ನು ಧನ್ಯಶ್ರೀ ತನ್ನ ತಾಯಿಗೆ ಹೇಳಿದ್ದಳು.
ಆತ ಜ.4ರಿಂದ ಕರೆ ಮಾಡುತ್ತಿದ್ದಾನೆ ಎಂದಿದ್ದು, ಸರಸ್ವತಿಯವರು ಜ.5ರಂದು ಆತನ ನಂಬರ್ ಪಡೆದು ಮೊಬೈಲ್‍ಗೆ ಕರೆ ಮಾಡಿ ಮಾತನಾಡಿದಾಗ ಆತ, “ನಿಮ್ಮ ಮಗಳಿಗೆ ಬುದ್ಧಿ ಹೇಳಿ ಇಲ್ಲವಾದರೆ ನಾವು ಅವಳ ಫೋಟೋವನ್ನು ಮೊಬೈಲ್‍ಗೆ ಹಾಕಿ ಮಾನ ಮರ್ಯಾದೆ ತೆಗೆಯುತ್ತೇವೆ ಎಂದು ಹೇಳಿದ್ದ. ಆತನ ಹೆಸರು ಕೇಳಿದಾಗ ಸಂತೋಷ ಎಂದು, ಊರು ಮಂಗಳೂರು ಎಂದು ಒಮ್ಮೆ ಬೆಳ್ತಂಗಡಿ ಮತ್ತೊಮ್ಮೆ ಉಜಿರೆ ಎಂದು ತಿಳಿಸಿದ್ದಾನೆ.
ಆತ ಪದೇ ಪದೇ ಕರೆ ಮಾಡಿ ಹೆದರಿಸುತ್ತಿದ್ದು, ಈ ವಿಚಾರವಾಗಿ ಮೂಡಿಗೆರೆಯ ನಾಲ್ಕೈದು ಮಂದಿ ಬಜರಂಗದಳದ ಕಾರ್ಯಕರ್ತರು ಎಂದು ಹೇಳಿಕೊಂಡು ಜ.5ರಂದು ಸಂಜೆ ಮನೆಗೆ ಬಂದು “ನಾವು ಬಜರಂಗದಳದವರು. ನಿಮ್ಮ ಮಗಳಿಗೆ ಬುದ್ಧಿ ಹೇಳಿ, ಇಲ್ಲವಾದರೆ ನಾವೇ ಬುದ್ಧಿ ಹೇಳಬೇಕಾಗುತ್ತದೆ. ನಮ್ಮ ಹಿಂದೂ ಧರ್ಮದ ಮರ್ಯಾದೆಗೆ ಧಕ್ಕೆಯಾದರೆ ನಾವು ಸಹಿಸುವುದಿಲ್ಲ. ನಾವು ಏನುಬೇಕಾದರೂ ಮಾಡುತ್ತೇವೆ” ಎಂದು ಹೆದರಿಸಿರುತ್ತಾರೆ.
ಸರಸ್ವತಿಯವರು ಎಂದಿನಂತೆ ಟೈಲರ್ ಕೆಲಸಕ್ಕೆ ಹೋದಾಗ ಅವರ ಪತಿ ಸಂಜೆ 5 ಗಂಟೆಗೆ ಫೋನ್ ಮಾಡಿ ಧನ್ಯಶ್ರೀ ಮನೆಯ ಬಾಗಿಲು ತೆಗೆಯುತ್ತಿಲ್ಲ. ಬೇಗ ಬಾ ಎಂದು ತಿಳಿಸಿದ್ದರು. ಕೂಡಲೇ ಸರಸ್ವತಿಯವರು ಮನೆ ಹತ್ತಿರ ಬಂದು ಬಾಗಿಲು ತೆಗೆಯಲು ಕೂಗಿದ್ದು, ಆಕೆ ಬಾಗಿಲು ತೆಗೆಯದಿದ್ದಾಗ ಅಕ್ಕಪಕ್ಕದವರ ಸಹಾಯದಿಂದ ಮನೆಯ ಹೆಂಚು ತೆಗೆದು ಒಳ ಹೋಗಿ ನೋಡಿದಾಗ ಮನೆಯ ಕೊಠಡಿಯ ಮೇಲ್ಬಾಗದ ಸಿಮೆಂಟ್ ಶೀಟಿನ ಕೆಳಭಾಗದ ಪಕಾಸಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಳು.
ಮನೆಯಲ್ಲಿ ಒಂದು ನೋಟ್ ಪುಸ್ತಕದಲ್ಲಿ ಡೆತ್‍ನೋಟ್ ಬರೆದಿದ್ದು, ಅದರಲ್ಲಿ ತಾನು ಯಾವುದೋ ಮುಸ್ಲಿಂ ಹುಡುಗನೊಂದಿಗೆ ಸಂಪರ್ಕ ಇರುವುದಾಗಿ ಭಾವಿಸಿ ಹಿಂದೂ ಹುಡುಗರು ನನ್ನ ನಂಬರ್‍ಗೆ ಕರೆ ಮಾಡಿ ಮುಸ್ಲಿಮರಿಗೆ ಸಪೋರ್ಟ್ ಮಾಡುವುದನ್ನು ಬಿಡು, ಇಲ್ಲದಿದ್ದರೆ ಹೇಗೆ ಬಿಡಿಸಬೇಕು ಎಂದು ಗೊತ್ತು ಎಂದು ಅಪಪ್ರಚಾರ ಮಾಡುತ್ತಿದ್ದು, ತನಗೆ ಯಾವುದೇ ಮುಸ್ಲಿಂ ಹುಡುಗನೊಂದಿಗೆ ಸಂಪರ್ಕ ಇಲ್ಲದಿದ್ದರೂ ಇದೆ ಎಂದು ಸುಳ್ಳು ಸುದ್ದಿಯನ್ನು ಹರಡಿರುತ್ತಾರೆ.
ಇದು ಬೇರೆಯವರ ಮನಸ್ಸಿಗೆ ತುಂಬಾ ಬೇಸರವಾಗಿರುತ್ತದೆ. ನನ್ನ ಬಗ್ಗೆ ಇಲ್ಲಸಲ್ಲದನ್ನು ಹೇಳಿ ಅಪಪ್ರಚಾರ ಮಾಡುತ್ತಿದ್ದು, ಹಿಂದೂ ಹುಡುಗರು ಹಿಂದೂ ಹುಡುಗಿಯಾದ ನನ್ನನ್ನು ನಂಬದೆ ಮಾನಸಿಕವಾಗಿ ಹಿಂಸಿಸುತ್ತಿದ್ದು, ಪದೇ ಪದೇ ಕರೆ ಮಾಡಿ ಮನೆಯ ಬಳಿ ಬಂದು ಬೆದರಿಕೆ ಹಾಕಿದ್ದರಿಂದ ನನ್ನ ಜೀವವನ್ನು ನಾನೇ ತೆಗೆದುಕೊಳ್ಳಬೇಕಾಗಿ ಬಂತು. ನಾನು ಯಾರಿಗೂ ಬಿಡುವುದಿಲ್ಲ. ನನಗಾದ ಅನ್ಯಾಯ ಇನ್ಯಾವ ಹುಡುಗಿಯರಿಗೂ ಆಗಬಾರದು ಎಂದು ಡೆತ್‍ನೋಟ್‍ನಲ್ಲಿ ನಮೂದಿಸಿರುವುದಾಗಿ ಪೊಲೀಸ್ ಎಫ್‍ಐಆರ್‍ನಲ್ಲಿ ಉಲ್ಲೇಖಿಸಿ ಪ್ರಕರಣ ದಾಖಲಿಸಲಾಗಿದೆ.







