ಸಂಸ್ಕೃತಿಯ ಅರ್ಥ ಹೇಳಲು ಹೊರಟರೆ ತಲೆ ತೆಗೆಯುವ ಪರಂಪರೆ ಕನ್ನಡದಲ್ಲಿ ಬೆಳೆಯುತ್ತಿದೆ: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ಜ.9: ನೈಜವಾದ ಸಂಸ್ಕೃತಿಯ ಅರ್ಥ ಹೇಳಲು ಹೋದರೆ, ತಲೆ ತೆಗೆಯಲು ಸಿದ್ಧವಾಗುವಂತಹ ಪರಂಪರೆ ಕನ್ನಡದಲ್ಲಿ ಬೆಳೆಯುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಆತಂಕ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕನ್ನಡ ಸಂಘರ್ಷ ಸಮಿತಿ ರಾಷ್ಟ್ರಕವಿ ಕುವೆಂಪು ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ‘ಅನಿಕೇತನ’ ಮತ್ತು ‘ಕುವೆಂಪು ಯುವ ಕವಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಪರಂಪರೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಕೆಲವರಿಗೆ, ನಮ್ಮ ಪರಂಪರೆಯೇ ವಿಕೃತಿಯಾಗಿದೆ. ಇಂತಹ ವಿಕೃತಿಯನ್ನು ಎದುರಿಸದಿದ್ದರೆ ಕುವೆಂಪು ಅವರ ಆಶಯಕ್ಕೆ ಧಕ್ಕೆ ತಂದಂತಾಗುತ್ತದೆ. ಅಲ್ಲದೆ, ನಿಜವಾದ ಸಂಸ್ಕೃತಿಯ ಅರ್ಥ ಹೇಳಲು ಹೋದರೆ ತಲೆ ತೆಗೆಯಲು ಸಿದ್ಧವಾಗುವಂತಹ ಪರಂಪರೆ ಕನ್ನಡದಲ್ಲಿ ಬೆಳೆಯುತ್ತಿದೆ ಎಂದರು.
ಕುವೆಂಪು ನಮ್ಮ ಪರಂಪರೆಯನ್ನು ಸರಿಯಾಗಿ ಅರ್ಥೈಸಿಕೊಂಡವರು. ಭಾರತೀಯ ಪರಂಪರೆ ಸರಿ ಮಾಡುವ ಜವಾಬ್ದಾರಿ ಎಲ್ಲ ತಲೆಮಾರುಗಳಿಗೂ ಇದೆ ಎಂಬುದನ್ನು ಒತ್ತಿ ಹೇಳುತ್ತಿದ್ದರು ಎಂದು ನುಡಿದರು.
ಕುವೆಂಪು ಅವರ ಶೂದ್ರ ತಪಸ್ವಿಯಲ್ಲಿ ರಾಮಾಯಣದ ಕತೆಯನ್ನು ಸರಿ ಮಾಡುವ ಪ್ರಯತ್ನ ಮಾಡಿ ಸಮಕಾಲೀನ ಸಾಹಿತಿಗಳಿಂದ ಟೀಕೆಗೆ ಒಳಗಾಗಿದ್ದರು. ಅವೈಜ್ಞಾನಿಕ ವೈಚಾರಿಕತೆಯನ್ನು ವೈಭವೀಕರಿಸಿದಾಗ ಕುವೆಂಪು ಸಿಡಿದೇಳುತ್ತಿದ್ದರು ಎಂದು ಅವರು ಹೇಳಿದರು.
ಧರ್ಮದ ಹೆಸರಿನಲ್ಲಿ ನಡೆಯುವ ಸಂಘರ್ಷಗಳನ್ನು ತಪ್ಪಿಸಲು ಕುವೆಂಪು ಸಾಹಿತ್ಯದಲ್ಲಿರುವ ವಿಚಾರಧಾರೆಗಳನ್ನು ಜನರಿಗೆ ತಲುಪಿಸಬೇಕಾದ ಅಗತ್ಯವಿದೆ . ಜೊತೆಗೆ ಯುವ ಪೀಳಿಗೆಯಲ್ಲೂ ಸಾಹಿತ್ಯದ ಆಸಕ್ತಿ ಬೆಳೆಸಬೇಕು ಎಂದು ಅವರು ಕರೆ ನೀಡಿದರು.
ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ಗತಿ, ಸ್ಥಿತಿ ಎರಡು ಜೀವನ ಪ್ರಕ್ರಿಯೆ ಎಂಬ ಬಹುದೊಡ್ಡ ಸೈದ್ಧಾಂತಿಕ ಸಿದ್ದಾಂತವನ್ನು ಕುವೆಂಪು ಅವರ ಕಾವ್ಯದೊಳಗೆ ಕಾಣಬಹುದಾಗಿದೆ. ಇನ್ನು ನಿರಂತರವಾಗಿ ವಿಕಸನ ಹೊಂದುತ್ತ, ಬದುಕಿನ ಮೇರೆಗಳನ್ನು ವಿಸ್ತರಿಸಿಕೊಂಡು ಹೋಗಬೇಕೆಂಬುದು ಅವರ ಆಶಯವಾಗಿತ್ತು ಎಂದು ನುಡಿದರು.
ಪ್ರಶಸ್ತಿ ಪ್ರದಾನ : ಹಿರಿಯ ಸಾಹಿತಿ ಸಿ.ಎಚ್.ಜಾಕಬ್ ಲೋಬೋ ಅವರಿಗೆ ಅನಿಕೇತನ ಪ್ರಶಸ್ತಿ, ಬರಹಗಾರ ಲಕ್ಷ್ಮೀ ನಾರಾಯಣ ಸ್ವಾಮಿ ಅವರಿಗೆ ಕುವೆಂಪು ಯುವಕವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್, ಹಿರಿಯ ಕಸಾಪ ಗೌರವ ಕಾರ್ಯದರ್ಶಿ ಚನ್ನೇಗೌಡ, ಪತ್ರಕರ್ತೆ ವಿಜಯಮ್ಮ ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೆಗೌಡ ಸೇರಿದಂತೆ ಪ್ರಮುಖರಿದ್ದರು.







