ಸಂಪನ್ಮೂಲ ದುರ್ಬಳಕೆಗೆ ವಿದೇಶಿ ಭೂಭಾಗದ ಮೇಲೆ ಕಣ್ಣಿರಿಸಿಲ್ಲ: ಪ್ರಧಾನಿ

ಹೊಸದಿಲ್ಲಿ, ಜ. 9: ನಮಗೆ ಯಾರೊಬ್ಬರ ಸಂಪನ್ಮೂಲವನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶವಾಗಲಿ, ಯಾರೊಬ್ಬರ ಭೂಭಾಗದ ಮೇಲೆ ಕಣ್ಣಾಗಲಿ ಇಲ್ಲ. ನಮ್ಮ ಗುರಿ ಯಾವತ್ತೂ ಸಾಮರ್ಥ್ಯ ನಿರ್ಮಾಣ ಹಾಗೂ ಸಂಪನ್ಮೂಲ ಅಭಿವೃದ್ಧಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವದಾದ್ಯಂತದ ಭಾರತೀಯ ಮೂಲದ ಸಂಸದೀಯ ವ್ಯಕ್ತಿಗಳ ಮೊದಲ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹೂಡಿಕೆ ಮಾಡಿ ಹಾಗೂ ದೇಶದ ಬೆಳವಣಿಗೆ ಉತ್ತೇಜಿಸಿ ಎಂದರು.
ಮಹಾತ್ಮಾ ಗಾಂಧಿ ಅವರು ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ 102ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಸಮಾವೇಶ ಆಯೋಜಿಸಲಾಗಿತ್ತು.ವಿಶ್ವದಲ್ಲಿ ಭಾರತ ರಚನಾತ್ಮಕ ಪಾತ್ರ ನಿರ್ವಹಿಸುತ್ತಿದೆ. ಉಗ್ರವಾದ ಹಾಗೂ ಭಯೋತ್ಪಾದನೆಯನ್ನು ಮಹಾತ್ಮಾ ಗಾಂಧಿ ಅವರ ಅಹಿಂಸಾ ಸಿದ್ಧಾಂತದಿಂದ ಎದುರಿಸಬಹುದು ಎಂದು ಅವರು ಹೇಳಿದರು.
ಲಾಭ, ನಷ್ಟದ ಆಧಾರದಲ್ಲಿ ನಾವು ಯಾವುದೇ ನೀತಿಯನ್ನು ಅಳತೆ ಮಾಡಲು ಸಾಧ್ಯವಿಲ್ಲ. ಆದರೆ, ಮಾನವೀಯ ಮೌಲ್ಯದ ಆಧಾರದ ಮೂಲಕ ನೋಡಬಹುದು ಎಂದರು. ಅಭಿವೃದ್ಧಿ ನೆರವಿನ ಭಾರತದ ಮಾದರಿ ಕೊಡು-ಕೊಳ್ಳುವ ಆಧಾರದಲ್ಲಿ ಇಲ್ಲ. ಅದು ಅಗತ್ಯತೆ ಹಾಗೂ ಆದ್ಯತೆಯನ್ನು ಅವಲಂಬಿಸಿದೆ ಎಂದು ನರೇಂದ್ರ ಮೋದಿ ಹೇಳಿದರು.