ಅನಿಶ್ಚಿತತೆಗಳನ್ನು ಧೈರ್ಯದಿಂದ ಎದುರಿಸಿದರೆ ಉದ್ಯಮದಲ್ಲಿ ಯಶಸ್ಸು-ಬಾದ್‌ಶಾ ತೋಡಾರ್
ಅಂತರ್ ಕಾಲೇಜು ವಾಣಿಜ್ಯೋತ್ಸವ ಉದ್ಘಾಟನೆ

ಪುತ್ತೂರು, ಜ. 9: ಉದ್ಯಮ ಕ್ಷೇತ್ರದ ಹೂಡಿಕೆಯು ಹಲವಾರು ರೀತಿಯ ಅನಿಶ್ಚಿತತೆಗಳನ್ನು ಒಳಗೊಂಡಿದ್ದು, ಅವುಗಳನ್ನು ಧೈರ್ಯದಿಂದ ಎದುರಿಸಲು ಶಕ್ತರಾದಾಗ ಮುಂದಿನ ಹಂತದಲ್ಲಿ ಯಶಸ್ಸನ್ನು ಗಳಿಸಬಹುದು ಎಂದು ಮಂಗಳೂರಿನ ಬೆಸ್ಟೊ ಬಿಸಿನೆಸ್ ನೆಟ್ ವರ್ಕ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಬಾದ್‌ಶಾ ತೋಡಾರ್ ಹೇಳಿದರು.
ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಆ್ಯಂಬಿಯೋರಾ 20 18’ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ವಾಣಿಜ್ಯೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವ್ಯವಹಾರ ರಂಗದಲ್ಲಿ ಸಫಲತೆಯನ್ನು ಹೊಂದಬೇಕಾದರೆ ಸರಿಯಾದ ಯೋಚನೆ, ಯೋಜನೆ, ಮುಂದಾಲೋಚನೆ, ಸ್ಪರ್ಧಾ ಸಾಮರ್ಥ್ಯ, ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅತೀ ಅವಶ್ಯ ಎಂದ ಅವರು ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಸ್ಪಷ್ಟ ಗುರಿ, ಪರಿಶ್ರಮ ಮತ್ತು ಬದ್ಧತೆಯನ್ನು ಅಳವಡಿಸಿಕೊಂಡರೆ ಮುಂದಿನ ಜೀವನದಲ್ಲಿ ಸಫಲತೆ ಕಾಣಬಹದು ಎಂದರು.
ಕಾಲೇಜಿನ ಸಂಚಾಲಕ ಆಲ್ಫ್ರೆಡ್ ಜೆ ಪಿಂಟೊ ಅವರು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಆ್ಯಂಟನಿ ಪ್ರಕಾಶ್ ಮೊಂತೇರೊ, ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಅವರು ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮ್ಯಾಕ್ಸಿಂ ಕಾರ್ಲ್ ಉಪಸ್ಥಿತರಿದ್ದರು.
ವಾಣಿಜ್ಯೋತ್ಸವದ ಸಂಯೋಜಕ ಡಾ ಹರ್ಬರ್ಟ್ ನಸೆರತ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ಮಹಮ್ಮದ್ ಆಶಿಕ್ ವಂದಿಸಿದರು. ಜೊಶ್ವಿಟ ಲೋಬೊ ನಿರೂಪಿಸಿದರು. ವಾಣಿಜ್ಯಶಾಸ್ತ್ರ ಅಧ್ಯಯನ ಮಾಡುವ ಪದವಿ ವಿದ್ಯಾರ್ಥಿಗಳಲ್ಲಿ ನಿರ್ವಹಣಾ ಕೌಶಲ್ಯ ಮತ್ತು ಸ್ಪರ್ಧಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾದ ಈ ಉತ್ಸವದಲ್ಲಿ ಬೆಸ್ಟ್ ಮ್ಯಾನೆಜರ್, ಬಿಸಿನೆಸ್ ಕ್ವಿಜ್, ಫೈನಾನ್ಸ್, ಮಾರ್ಕೆಟಿಂಗ್ ಮತ್ತು ಫೊಟೋಗ್ರಫಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಡುವ 12 ಕಾಲೇಜುಗಳ 108 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







