ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡುತ್ತಿರುವ ಮೋದಿ ಸರಕಾರ: ಜಿಗ್ನೇಶ್ ಮೇವಾನಿ

ಹೊಸದಿಲ್ಲಿ, ಜ.9: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಸಂವಿಧಾನ ಹಾಗು ಪ್ರಜಾಪ್ರಭುತ್ವಕ್ಕೆ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ದಲಿತ ಹೋರಾಟಗಾರ ಹಾಗು ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಸಂಸತ್ ರಸ್ತೆಯಲ್ಲಿ ನಡೆದ ‘ಹೂಂಕಾರ್ ರ್ಯಾಲಿ’ಯನ್ನುದ್ದೇಶಿಸಿ ಮಾತನಾಡಿದ ಅವರು, ತನ್ನ ರ್ಯಾಲಿಗೆ ಅನುಮತಿ ನಿರಾಕರಿಸಿರುವುದು ಗುಜರಾತ್ ಮಾದರಿಯ ರಾಜಕಾರಣಕ್ಕೆ ಉದಾಹರಣೆಯಾಗಿದೆ ಎಂದರು.
“ಚಂದ್ರಶೇಖರ್ ಆಝಾದ್ ತ ಬಿಡುಗಡೆ, ಸಂವಿಧಾನದ ಪರಿಣಾಮಕಾರಿ ಅನುಷ್ಠಾನ ಹಾಗು ಯುವಜನತೆಗೆ 2 ಕೋಟಿ ಉದ್ಯೋಗದ ಬಗ್ಗೆ ಮಾತನಾಡುವುದಕ್ಕೆ ಅವಕಾಶ ನೀಡದಿರುವುದನ್ನು ದೇಶದ 125 ಕೋಟಿ ಜನರು ನೋಡುತ್ತಿದ್ದಾರೆ. ಒಬ್ಬ ಚುನಾಯಿತ ಪ್ರತಿನಿಧಿಗೆ ಈ ಹಕ್ಕು ಇಲ್ಲದಿದ್ದರೆ, ಇದು ಗುಜರಾತ್ ಮಾದರಿಯೇ ಆಗಿದೆ” ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ದ್ವೇಷ ರಾಜಕಾರಣದ ವಿರುದ್ಧ ನಾನು ನಿಲ್ಲುತ್ತೇನೆ ಹಾಗು ಸಂವಿಧಾನ ಮೌಲ್ಯಗಳನ್ನು ಗೌರವಿಸುತ್ತೇನೆ ಎಂದ ಅವರು, ನಾನು ಒಗ್ಗಟ್ಟಿನ ರಾಜಕೀಯದಲ್ಲಿ, ಪ್ರೀತಿಯ ರಾಜಕೀಯದಲ್ಲಿ ನಂಬಿಕೆ ಇರಿಸಿದ್ದೇನೆಯೇ ಹೊರತು ಲವ್ ಜಿಹಾದ್ ನ ರಾಜಕೀಯದಲ್ಲಲ್ಲ ಎಂದರು.