ಶತ್ರುಘ್ನ ಸಿನ್ಹಾ ಬಂಗ್ಲೆಯ ಅನಧಿಕೃತ ನಿರ್ಮಾಣ ತೆರವುಗೊಳಿಸಿದ ಬಿಎಂಸಿ
ಮುಂಬೈ, ಜ. 9: ಜುಹುನಲ್ಲಿರುವ ಬಿಜೆಪಿ ಸಂಸದ ಹಾಗೂ ಶತ್ರುಘ್ನ ಸಿನ್ಹಾ ಅವರಿಗೆ ಸೇರಿದ 8 ಮಹಡಿಯ ಕಟ್ಟಡ ‘ರಾಮಾಯಣ’ದ ಒಳಗಿರುವ ಹಲವು ಅಕ್ರಮ ನಿರ್ಮಾಣಗಳನ್ನು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಧ್ವಂಸಗೊಳಿಸಿದೆ.
ಧ್ವಂಸ ಕಾರ್ಯಾಚರಣೆ ಪೂರ್ಣಗೊಂಡಿಲ್ಲ. ಅಕ್ರಮ ಪೂಜಾ ಕೊಠಡಿ ವರ್ಗಾಯಿಸಲು ನಟನಲ್ಲಿ ವಿನಂತಿಸಲಾಗಿದೆ. ಅವರು ವಿಫಲವಾದರೆ ಅದನ್ನು ಕೂಡ ತೆರವುಗೊಳಿಸಲಾಗುವುದು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಅನಧಿಕೃತ ನಿರ್ಮಾಣದ ವಿರುದ್ಧ ಬಿಎಂಸಿ ಕಾನೂನಿನ ಅಡಿಯಲ್ಲಿ ಸಿನ್ಹಾ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಇದಲ್ಲದೆ ಧ್ವಂಸ ಮಾಡಲು ಖರ್ಚಾದ ಹಣವನ್ನು ಕೂಡ ಸಿನ್ಹಾ ಅವರಿಂದಲೇ ವಸೂಲಿ ಮಾಡಲಾಗುವುದು ಎಂದು ಬಿಎಂಸಿ ತಿಳಿಸಿದೆ.
ಪಶ್ಚಿಮ ಉಪನಗರದ ಪ್ರದೇಶದ ಜುಹುವಿನಲ್ಲಿ ಮರು ಅಭಿವೃದ್ಧಿಗೊಳಿಸಲಾದ ನಿವಾಸದಲ್ಲಿ 2012ರಿಂದ ಶತ್ರುಘ್ನ ಸಿನ್ಹಾ ವಾಸಿಸುತ್ತಿದ್ದಾರೆ. ಈ ಕಟ್ಟಡದ ಕೆಲವು ಭಾಗಗಳು ಅನಧಿೃತ ಎಂದು ಬಿಎಂಸಿ ಪತ್ತೆ ಮಾಡಿತ್ತು.
ಅನಧಿಕೃತ ನಿರ್ಮಾಣದ ಹಿನ್ನೆಲೆಯಲ್ಲಿ ಡಿಸೆಂಬರ್ 6ರಂದು ಬಿಎಂಸಿ ಮಹಾರಾಷ್ಟ್ರ ವಲಯ ಹಾಗೂ ನಗರ ಯೋಜನೆ ಕಾಯ್ದೆ ಅಡಿ ನೋಟಿಸು ಜಾರಿ ಮಾಡಲಾಗಿತ್ತು. ಆದರೆ, ಸಿನ್ಹಾ ಇದನ್ನು ನಿರ್ಲಕ್ಷಿಸಿದ್ದರು. ಈ ಸಂದರ್ಭ ಸಿನ್ಹಾ ಹೆಚ್ಚುವರಿ ನಿರ್ಮಾಣಕ್ಕೆ ಪರವಾನಿಗೆಗೆ ತಾನು ಕಾಯುತ್ತಿರುವುದಾಗಿ ತಿಳಿಸಿದ್ದರು.