ಒಂದು ತಿಂಗಳೊಳಗಾಗಿ ಕಾವೇರಿ ತೀರ್ಪು: ಸುಪ್ರೀಂಕೋರ್ಟ್

ಹೊಸದಿಲ್ಲಿ, ಜ.9: ತಮಿಳುನಾಡು ಮತ್ತು ಕರ್ನಾಟಕದ ಮಧ್ಯೆಯಿರುವ ದಶಕಗಳಷ್ಟು ಹಳೆಯ ಕಾವೇರಿ ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಇನ್ನೊಂದು ತಿಂಗಳ ಒಳಗಾಗಿ ಪ್ರಕಟಿಸುವುದಾಗಿ ಸರ್ವೋಚ್ಛ ನ್ಯಾಯಾಲಯ ಮಂಗಳವಾರ ತಿಳಿಸಿದೆ.
ಮುಂದಿನ ನಾಲ್ಕು ವಾರಗಳ ಒಳಗಾಗಿ ನ್ಯಾಯಾಲಯವು ಕಾವೇರಿ ವಿವಾದಕ್ಕೆ ಸಂಬಂಧಿಸಿ ತೀರ್ಪು ನೀಡಿದ ನಂತರವಷ್ಟೇ ಯಾವುದೇ ಒಕ್ಕೂಟ ಅಥವಾ ಸಂಘಟನೆ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಬಹದು ಎಂದು ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶರಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ತಿಳಿಸಿದೆ.
ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಕಾವೇರಿ ಜಲ ವಿವಾದ ಪೀಠ (ಸಿಡಬ್ಲೂಡಿಟಿ) 2007ರಲ್ಲಿ ನೀಡಿರುವ ಆದೇಶದ ವಿರುದ್ಧ ತಮಿಳುನಾಡು, ಕರ್ನಾಟಕ ಮತ್ತು ಕೇರಳವು ಮೇಲ್ಮನವಿ ಸಲ್ಲಿಸಿದ ಕಾರಣ ಸೆಪ್ಟೆಂಬರ್ 20, 2017ರಲ್ಲಿ ನಡೆದ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯ ಪೀಠವು ಈ ಬಗ್ಗೆ ತೀರ್ಪನ್ನು ಕಾಯ್ದಿರಿಸಿತ್ತು.
ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ಕುಡಿಯುವ ನೀರಿನ ಪೂರೈಕೆ ವಿಷಯದಲ್ಲಿ ನ್ಯಾಯಾಲಯವು ಮಧ್ಯಪ್ರವೇಶ ಮಾಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತೆ ಕಿರಣ್ ಮಜುಮ್ದಾರ್ ಶಾ ನೇತೃತ್ವದ ನಾಗರಿಕ ಸಂಘಟನೆ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿಪಿಎಸಿ) 2016ರಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಕಾವೇರಿ ವಿವಾದದ ತೀರ್ಪಿನ ಬಗ್ಗೆ ಪ್ರಸ್ತಾಪ ಮಾಡಿದೆ.
ಇನ್ಫೋಸಿಸ್‌ನ ಮಾಜಿ ನಿರ್ದೇಶಕರಾದ ಮೋಹನ್‌ದಾಸ್ ಪೈ ಉಪಾಧ್ಯಕ್ಷರಾಗಿರುವ ಬಿಪಿಎಸಿಯು, ಬೆಂಗಳೂರಿನ ಜನರಿಗೆ ಸಾಕಷ್ಟು ಕುಡಿಯುವ ನೀರಿನ ಅಗತ್ಯವಿದೆ ಮತ್ತು ಬದುಕುವ ಅವರ ಹಕ್ಕನ್ನು ಶ್ರೇಷ್ಠ ನ್ಯಾಯಾಲಯವು ರಕ್ಷಿಸಬೇಕು ಎಂದು ನ್ಯಾಯಾಲಯದಲ್ಲಿ ತಿಳಿಸಿದ್ದರು.