ಕಾಂಗ್ರೆಸ್ ಸಮಾವೇಶಕ್ಕೆ ಊಟ: ವಿಎಚ್‌ಪಿ, ಬಜರಂಗ ದಳ ಟೀಕೆ
ಉಡುಪಿ, ಜ.9: ಕಳೆದ ತಿಂಗಳು ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ವೇಳೆ ದೇಶಾದ್ಯಂತದಿಂದ ಆಗಮಿಸಿದ ಸಾಧು ಸಂತರು ಹಾಗೂ ಲಕ್ಷಾಂತರ ಮಂದಿ ಹಿಂದೂಗಳಿಗೆ ಊಟದ ವ್ಯವಸ್ಥೆ ಮಾಡುವಂತೆ ಮಾಡಿಕೊಂಡ ಮನವಿಯನ್ನು ಕೊಲ್ಲೂರು ದೇವಾಲಯ ತಿರಸ್ಕರಿಸಿದ್ದು, ನಿನ್ನೆ ಬೈಂದೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಊಟ ನೀಡಿರುವುದನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಜಿಲ್ಲಾ ಸಮಿತಿಗಳು ಟೀಕಿಸಿವೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ಜಿಲ್ಲಾಧ್ಯಕ್ಷ ಪಿ.ವಿಲಾಸ್‌ಕುಮಾರ್ ನಾಯಕ್, ಧಾರ್ಮಿಕ ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆ ಮಾಡದ ಕೊಲ್ಲೂರು ದೇವಸ್ಥಾನ, ಸರಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡ 15,000 ಮಂದಿಗೆ ಊಟದ ವ್ಯವಸ್ಥೆ ಮಾಡಿದೆ ಎಂದವರು ದೇವಳದ ಆಡಳಿತ ಮಂಡಳಿ ವಿರುದ್ಧ ಆರೋಪಿಸಿದರು.
ಸರಕಾರದ ಈ ನಡೆಯಿಂದ ಹಿಂದೂ ಸಮಾಜಕ್ಕೆ ನೋವಾಗಿದೆ. ಧರ್ಮ ಸಂಸದ್‌ಗೆ ಊಟ ನೀಡದಿರುವುದು ಸರಕಾರದ ಪಿತೂರಿಯಾಗಿದೆ. ಇದಕ್ಕೆ ಮುಖ್ಯಮಂತ್ರಿಗಳ ಹಿಂದೂ ವಿರೋಧಿ ನಿಲುವೇ ಕಾರಣ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕರಾದ ಸುನಿಲ್ ಕೆ.ಆರ್., ದಿನೇಶ್ ಮೆಂಡನ್ ಹಾಗೂ ಸಂತೋಷ್ ಸುವರ್ಣ ಉಪಸ್ಥಿತರಿದ್ದರು.





