ಬಿಎಂಟಿಎಫ್‌ಗೆ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ಸೂಚನೆ
ಎಫ್‌ಐಆರ್ ಪ್ರತಿ ವೆಬ್‌ಸೈಟ್‌ಗೆ ಅಪ್‌ಲೊಡ್ ಮಾಡದಿರುವ ವಿಚಾರ
ಬೆಂಗಳೂರು, ಜ.9: ಟ್ರಾಪ್ ಮತ್ತು ರೈಡ್ ಪ್ರಕರಣ ಹೊರತುಪಡಿಸಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ದಾಖಲಿಸುವ ಪ್ರಥಮ ವರ್ತಮಾನ ವರದಿಗಳನ್ನು (ಎಫ್‌ಐಆರ್) 24 ಗಂಟೆಯಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ದಾಖಲಿಸುವ ಪ್ರಥಮ ವರ್ತಮಾನ ವರದಿಗಳ (ಎಫ್‌ಐಆರ್) ಪ್ರತಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಎಸ್.ಉಮಾಪತಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಮಂಗಳವಾರ ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ಎಸಿಬಿ ಪರ ವಕೀಲ ವೆಂಕಟೇಶ ದಳವಾಯಿ ಅವರು ಈ ಪ್ರಮಾಣಪತ್ರ ಸಲ್ಲಿಸಿದರು.
ಲಂಚ ಸ್ವೀಕಾರದ ವೇಳೆ ಆರೋಪಿಗಳ ಮೇಲೆ ಎಸಿಬಿ ಟ್ರಾಪ್ ಮಾಡಲಿದೆ. ಹಾಗೆಯೇ, ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಆರೋಪಿಗಳ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ರೈಡ್ ಮಾಡುತ್ತದೆ. ಟ್ರಾಪ್ ಹಾಗೂ ರೈಡ್ ಮಾಡುವ ಮುನ್ನವೇ ಎಫ್‌ಐಆರ್ ದಾಖಲಿಸಲಾಗುವುದು. ಆದರೆ, ಆ ಎಫ್‌ಐಆರ್‌ಗಳನ್ನು 24 ಗಂಟೆಯಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗದು. ಕಾರಣ ಟ್ರಾಪ್ ಹಾಗೂ ರೈಡ್ ನಡೆಸಲು ವಿಳಂಬವಾಗಬಹುದು. ಒಂದೊಮ್ಮೆ ಎಫ್‌ಐಆರ್ ಪ್ರಕಟಿಸಿದರೆ ಅದರಲ್ಲಿನ ಅಂಶಗಳು ಬಯಲಾಗಿ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಅದನ್ನು ಹೊರತುಪಡಿಸಿ ಉಳಿದ ಪ್ರಕರಣಗಳ ಸಂಬಂಧ ದಾಖಲಿಸುವ ಎಫ್‌ಐಆರ್‌ಗಳನ್ನು 24 ಗಂಟೆಯಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಈ ಸಂಬಂಧ ಎಸಿಬಿಯ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದು ದಳವಾಯಿ ಕೋರ್ಟ್‌ಗೆ ವಿವರಿಸಿದರು.
ಈ ಪ್ರಮಾಣ ಪತ್ರ ಒಪ್ಪಿದ ನ್ಯಾಯಪೀಠ, ಬಿಎಂಟಿಎಫ್ ಸಹ ಎಫ್‌ಐಆರ್‌ಗಳನ್ನು 24 ಗಂಟೆಯಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಆ ಸಂಬಂಧ ಸುತ್ತೋಲೆ ಹೊರಡಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಬಿಎಂಟಿಎಫ್ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಯಾವುದೇ ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದರೆ, ಅದರ ಪ್ರತಿಯನ್ನು 24 ಗಂಟೆಯೊಳಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಬೇಕು ಎಂದು ಸುಪ್ರಿಂ ಕೋರ್ಟ್ ಸ್ಪಷ್ಟವಾಗಿ ಆದೇಶ ಮಾಡಿದೆ. ಈ ಆದೇಶವನ್ನು ಎಸಿಬಿ ಮತ್ತು ಬಿಬಿಎಂಟಿಎಫ್ ಪಾಲಿಸುತ್ತಿಲ್ಲ. ಆದ್ದರಿಂದ ದಾಖಲಿಸುವ ಎಫ್‌ಐಆರ್‌ಗಳನ್ನು 24 ಗಂಟೆಯಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಎಸಿಬಿ ಹಾಗೂ ಬಿಎಂಟಿಎಫ್‌ಗೆ ನಿರ್ದೇಶಿಸಬೇಕು ಅರ್ಜಿಯಲ್ಲಿ ಕೋರಲಾಗಿತ್ತು.







