ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಸರಕಾರಿ ಕಟ್ಟಡದಲ್ಲಿ ಖಾಸಗಿ ಕಾರ್ಯಕ್ರಮ ಅನುಮತಿ ವಿಚಾರ
ಬೆಂಗಳೂರು, ಜ.9: ಸರಕಾರಿ ಕಟ್ಟಡಗಳಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅರ್ಜಿದಾರರ ಪರ ವಕೀಲರಿಗೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲು ಸೂಚಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು.
ಮಲ್ಲೇಶ್ವರದಲ್ಲಿರುವ ಸರಕಾರಿ ಬಾಲಕರ ಪಿಯು ಕಾಲೇಜು ಹಾಗೂ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಉನ್ನತಿ ಹೀಲಿಂಗ್ ಫೌಂಡೇಶನ್ ಟ್ರಸ್ಟ್ ಆಯೋಜಿಸಿರುವ ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಸರಕಾರದ ಕ್ರಮ ಪ್ರಶ್ನಿಸಿ ವಕೀಲ ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ಮಲ್ಲೇಶ್ವರದಲ್ಲಿರುವ ಸರಕಾರಿ ಬಾಲಕರ ಪಿಯು ಕಾಲೇಜು ಹಾಗೂ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಉನ್ನತಿ ಹೀಲಿಂಗ್ ಫೌಂಡೇಶನ್ ಟ್ರಸ್ಟ್‌ಗೆ ಶಿಕ್ಷಣ ಇಲಾಖೆಯು ಖಾಸಗಿ ಕಾರ್ಯಕ್ರಮವನ್ನು ನಡೆಸಲು ಉಚಿತವಾಗಿ ಅನುಮತಿ ನೀಡಿರುವುದು ಕಾನೂನು ಬಾಹಿರವಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಲೋಕೋಪಯೋಗಿ ಇಲಾಖೆ ರೂಪಿಸಿರುವ ನಿಯಮದಂತೆ ಸರಕಾರಿ ಕಟ್ಟಡವನ್ನು ಖಾಸಗಿಯವರಿಗೆ ಬಾಡಿಗೆಗೆ ನೀಡಲು ಅವಕಾಶವಿದೆ. ಆದರೆ, ಸರಕಾರಿ ಬಾಲಕರ ಪಿಯು ಕಾಲೇಜು ಹಾಗೂ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಉನ್ನತಿ ಹೀಲಿಂಗ್ ಫೌಂಡೇಶನ್ ಟ್ರಸ್ಟ್‌ಗೆ ಶಿಕ್ಷಣ ಇಲಾಖೆಯು ಖಾಸಗಿ ಕಾರ್ಯಕ್ರಮವನ್ನು ನಡೆಸಲು ಉಚಿತವಾಗಿ ಅನುಮತಿ ನೀಡಿದ್ದು ಕಾನೂನು ಬಾಹಿರ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಈಗಾಗಲೇ ಕಾರ್ಯಕ್ರಮ ಮುಗಿದು ಹೋಗಿದ್ದು, ಈಗ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ, ನಿಮ್ಮ ಮನವಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿ ಎಂದು ಸೂಚಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.







