ಮಂಗಳೂರು: ಹಣ ಕಳೆದುಕೊಂಡ ಆಟೊ ಚಾಲಕ
ಮಂಗಳೂರು, ಜ. 9: ನಗರದ ಪಂಪ್‌ವೆಲ್‌ನಿಂದ ವೆಲೆನ್ಸಿಯಾಗೆ ಬರುವ ಸಂದರ್ಭದಲ್ಲಿ ಆಟೋ ಚಾಲಕರೊಬ್ಬರು 1.30 ಲಕ್ಷ ರೂ. ವನ್ನು ಕಳೆದುಕೊಂಡಿರುವ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿ.ಸಿ.ರೋಡ್ ತಾಳಿಪಡ್ಪು ಮನೆ ನಿವಾಸಿ ಅಬ್ದುಲ್ ನಾಸಿರ್ (34) ಎಂಬವರೇ ಹಣವನ್ನು ಕಳೆದುಕೊಂಡವರು. ಇವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದಾರೆ. ಇವರ ಬಳಿಯಿದ್ದ ಹಳೇಯ ಆಟೋ ರಿಕ್ಷಾವನ್ನು ಎಕ್ಸ್‌ಚೇಂಜ್ ಮಾಡಿ ಹೊಸತನ್ನು ಖರೀದಿಸಲು ಉದ್ದೇಶಿಸಿದ್ದರು. ಅದರಂತೆ ನಗರದ ವೆಲೆನ್ಸಿಯಾದಲ್ಲಿರುವ ಬಜಾಜ್ ಆಟೋ ಶೋ ರೂಂಗೆ ತೆರಳಿ ಮಾತುಕತೆ ನಡೆಸಿದ್ದರು. ತನ್ನ ಹಳೆಯ ಆಟೋವನ್ನು ಕೊಟ್ಟು ಹೊಸತನ್ನು ಖರೀದಿಸಲೆಂದು ಸುಮಾರು 1.30 ಲಕ್ಷ ರೂ.ವನ್ನು ಹೊಂದಿಸಿಕೊಂಡು ಕಳೆದ ತಿಂಗಳ ಡಿ. 22ರಂದು ಬೆಳಗ್ಗೆ 10:30ಕ್ಕೆ ತನ್ನ ಹಳೆಯ ಆಟೋ ರಿಕ್ಷಾದೊಂದಿದೆ ವೆಲೆನ್ಸಿಯಾದಲ್ಲಿರುವ ಬಜಾಜ್ ಶೋ ರೂಂಗೆ ಬಂದಿದ್ದರು. ಹಣವನ್ನು ಸಂದಾಯ ಮಾಡಲೆಂದು ಪ್ಯಾಂಟ್‌ನ ಕಿಸೆಯಿಂದ ಹಣವನ್ನು ತೆಗೆಯಲು ಹೋದಾಗ ಕಳವು ಆಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಡ ಕುಟುಂಬದವರಾದ ನಾಸಿರ್ ಅವರು ಬಹಳ ಕಷ್ಟದಲ್ಲಿ ಹಣವನ್ನು ಹೊಂದಿಸಿಕೊಂಡು ಬಂದಿದ್ದು, ಇದೀಗ ಯಾರಿಗಾದರೂ ಸಿಕ್ಕದ್ದಲ್ಲಿ ಅವರಿಗೆ ತಲುಪಿಸುವಂತೆ ನಾಸಿರ್ ಮನವಿ ಮಾಡಿದ್ದಾರೆ. ನಾಸಿರ್ ಅವರ ಮೊಬೈಲ್ ಸಂಖ್ಯೆ 8088574785 ಆಗಿದೆ.





