ಬಿಪಿಎಲ್ ಕುಟುಂಬಗಳಿಗೆ ಕುರಿ, ಮೇಕೆ, ಕೋಳಿ ಒದಗಿಸಲು ಚಿಂತನೆ: ಎ.ಮಂಜು

ಬೆಂಗಳೂರು, ಜ.9: ಪಶುಭಾಗ್ಯ ಯೋಜನೆಯಡಿ ಹಲವರಿಗೆ ಕುರಿ, ಮೇಕೆಗಳನ್ನು ಒದಗಿಸಲಾಗುತ್ತಿದೆ. ಇದರ ಉಪಯೋಗವನ್ನು ಬಿಪಿಎಲ್ ಕುಟುಂಬಗಳಿಗೂ ವಿಸ್ತರಿಸಲು ರಾಜ್ಯ ಸರಕಾರ ಉದ್ದೇಶಿಸಿದೆ ಎಂದು ಪಶುಸಂಗೋಪನಾ ಸಚಿವ ಎ.ಮಂಜು ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕುಟುಂಬಗಳಿಗೆ ಕುರಿ, ಮೇಕೆ, ಕೋಳಿ ಒದಗಿಸಲು ಸರಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಇಳಿಮುಖವಾಗಿರುವ ಮಾಂಸದ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಕುರಿ, ಮೇಕೆ, ಕೋಳಿಗಳನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದರು.
ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಆಸಕ್ತ ಕುಟುಂಬಗಳಿಗೆ ಕುರಿ, ಮೇಕೆ ಹಾಗೂ ಕೋಳಿ ಸಾಕಲು ಒದಗಿಸುವ ಸಂಬಂಧ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಎ.ಮಂಜು ಹೇಳಿದರು.
ವ್ಯಕ್ತಿಯೋರ್ವ ವರ್ಷಕ್ಕೆ ಸರಾಸರಿ 11 ಕೆ.ಜಿ.ಯಷ್ಟು ಮಾಂಸ ಸೇವಿಸುತ್ತಾನೆ. ಆದರೆ, ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಮಾಂಸದ ಪ್ರಮಾಣವು ತಲಾ 3 ಕೆ.ಜಿ.ಯಷ್ಟು ಮಾತ್ರವಿದೆ. ಮನುಷ್ಯನ ಬೇಡಿಕೆಯ ಪ್ರಮಾಣಕ್ಕಿಂತಲೂ ತಲಾ 8 ಕೆ.ಜಿ.ಯಷ್ಟು ಮಾಂಸದ ಕೊರತೆಯಿದೆ. ಹೀಗಾಗಿ, ಬೇರೆ ರಾಜ್ಯಗಳಿಂದ ಕುರಿ, ಮೇಕೆ, ಕೋಳಿಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿವರಿಸಿದರು.
ಬಿಪಿಎಲ್ ಕುಟುಂಬಗಳಿಗೆ ತಲಾ ಎರಡು ಕುರಿ, ಮೇಕೆ ಮತ್ತು ಹಲವು ಕೋಳಿಗಳನ್ನು ಒದಗಿಸಿದರೆ ಅವುಗಳ ಪಾಲನೆಯಿಂದ ವಾರ್ಷಿಕವಾಗಿ 35 ರಿಂದ 40 ಸಾವಿರ ರೂ.ಗಳಷ್ಟು ಆದಾಯವನ್ನುಗಳಿಸಲು ಸಾಧ್ಯವಿದೆ ಎಂದು ಮಂಜು ಹೇಳಿದರು.
ರಾಜ್ಯದಲ್ಲಿ ಪಶು ಆಹಾರದ ಬೆಲೆಯನ್ನು ಪ್ರತಿ ಟನ್‌ಗೆ 2 ಸಾವಿರ ರೂ.ಗಳಷ್ಟು ಕಡಿಮೆ ಮಾಡಲು ಆದೇಶಿಸಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಕೆಎಂಎಫ್ ತಯಾರಿಸುತ್ತಿರುವ ಹಾಲಿನ ಪುಡಿಯು ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಫೆಬ್ರವರಿ ವೇಳೆಗೆ ದಾಸ್ತಾನಿರುವ ಎಲ್ಲ ಪುಡಿಯು ಮಾರಾಟವಾಗುತ್ತದೆ ಎಂದು ಅವರು ತಿಳಿಸಿದರು.
ಸದ್ಯಕ್ಕೆ ಪ್ರತಿ ದಿನ 77 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಪ್ರಮಾಣವು ಒಂದು ಕೋಟಿ ಲೀಟರ್‌ಗೆ ಏರಿಕೆಯಾಗಲಿದೆ ಎಂದು ಎ.ಮಂಜು ವಿಶ್ವಾಸ ವ್ಯಕ್ತಪಡಿಸಿದರು.
ಜ.4-6 ರವರೆಗೆ ನಡೆದ ರಾಜ್ಯಮಟ್ಟದ ಪಶುಮೇಳ ಯಶಸ್ವಿಯಾಗಿದ್ದು, ಯಾವ ತಳಿಯನ್ನು ಪಡೆದರೆ ಹೆಚ್ಚಿನ ಹಾಲು ಉತ್ಪಾದನೆ ಮಾಡಬಹುದು, ಮಾಂಸ ಉತ್ಪಾದಿಸಬಹುದು ಎಂಬ ಅಂಶವನ್ನು ಬಹುಪಾಲು ರೈತರು ಕಂಡುಕೊಂಡಿದ್ದಾರೆ ಎಂದು ಅವರು ಹೇಳಿದರು.







