ಝಾಕಿರ್ ನಾಯ್ಕ್ ಮಾತ್ರ ಏಕೆ ನಿಮ್ಮ ಗುರಿ ? ಅಸಾರಾಮ್ ಬಾಪು ವಿರುದ್ಧ ಕ್ರಮ ಏಕಿಲ್ಲ ?
ಜಾರಿ ನಿರ್ದೇಶನಾಲಯಕ್ಕೆ ಟ್ರಿಬ್ಯುನಲ್ ಚಾಟಿ

ಝಾಕಿರ್ ನಾಯ್ಕ್ - ಅಸಾರಾಮ್ ಬಾಪು
ಹೊಸದಿಲ್ಲಿ, ಜ. 9 : ಧಾರ್ಮಿಕ ವಿದ್ವಾಂಸ ಡಾ. ಝಾಕಿರ್ ನಾಯ್ಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡಲು ಇಂಟರ್ಪೋಲ್ ನಿರಾಕರಿಸಿ ರಾಷ್ಟ್ರೀಯ ತನಿಖಾ ತಂಡ (ಎನ್ ಐ ಎ) ಮುಖಭಂಗ ಎದುರಿಸಿದ ಬೆನ್ನಿಗೇ ಜಾರಿ ನಿರ್ದೇಶನಾಲಯ (ಇಡಿ) ಕ್ಕೂ ಈ ವಿಷಯದಲ್ಲಿ ಮುಜುಗರ ಉಂಟಾಗಿದೆ.
ಡಾ. ಝಾಕಿರ್ ನಾಯ್ಕ್ ವಿರುದ್ಧದ ತನಿಖೆಯಲ್ಲಿ ಸೂಕ್ತ ಸಾಕ್ಷ್ಯ ನೀಡದೆ ಇರುವುದಕ್ಕೆ ಜಾರಿ ನಿರ್ದೇಶನಾಲಯವನ್ನು ನ್ಯಾಯಾಧಿಕರಣ ಟ್ರಿಬ್ಯುನಲ್ ತರಾಟೆಗೆ ತೆಗೆದುಕೊಂಡಿದೆ.
ಡಾ. ಝಾಕಿರ್ ನಾಯ್ಕ್ ಅವರ ಮುಟ್ಟುಗೋಲು ಹಾಕಲಾದ ಸೊತ್ತುಗಳನ್ನು ಜಾರಿ ನಿರ್ದೇಶನಾಲಯ ತನ್ನ ವಶಕ್ಕೆ ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡದೆ ಯಥಾಸ್ಥಿತಿ ಕಾಪಾಡಲು ಆದೇಶಿಸಿದ ಅಪೆಲ್ಲೆಟ್ ಟ್ರಿಬ್ಯುನಲ್ ಫಾರ್ ಪಿಎಂಎಲ್ಎ (ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್) ಮುಖ್ಯಸ್ಥ ನ್ಯಾ. ಮನಮೋಹನ್ ಸಿಂಗ್ ಅವರು ಸ್ವಯಂ ಘೋಷಿತ ಬಾಬಾಗಳ ವಿರುದ್ಧವೂ ನೀವು ಇಂತಹದೇ ಕ್ರಮ ಕೈಗೊಳ್ಳುತ್ತೀರಾ ಎಂದು ಜಾರಿ ನಿರ್ದೇಶನಾಲಯ ವನ್ನು ಪ್ರಶ್ನಿಸಿದರು.
"10,000 ಕೋಟಿ ರೂ. ಗೂ ಹೆಚ್ಚು ಸೊತ್ತು ಇರುವ ಹಾಗು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ ಹತ್ತು ಬಾಬಗಳನ್ನು ನಾನು ಹೆಸರಿಸುತ್ತೇನೆ. ಅವರಲ್ಲಿ ನೀವು ಒಬ್ಬರ ವಿರುದ್ಧವಾದರೂ ಕ್ರಮ ಕೈಗೊಂಡಿದ್ದೀರಾ ? ಅಸಾರಾಮ್ ಬಾಪು ವಿರುದ್ಧ ನೀವು ಏನು ಮಾಡಿದ್ದೀರಿ ?" ಎಂದು ನ್ಯಾ. ಸಿಂಗ್ ಜಾರಿ ನಿರ್ದೇಶನಾಲಯ ವಕೀಲರನ್ನು ಪ್ರಶ್ನಿಸಿದರು.
" ಕಳೆದ ಹತ್ತು ವರ್ಷಗಳಲ್ಲಿ ಅಸಾರಾಮ್ ಬಾಪು ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಲು ಯಾವುದೇ ಕ್ರಮ ಕೈಗೊಳ್ಳದ ಇಡಿ ಈಗ ಈ ವಿಷಯದಲ್ಲಿ ( ಝಾಕಿರ್ ನಾಯ್ಕ್ ) ಮಾತ್ರ ಬಹಳ ಬೇಗ ಕ್ರಮ ಕೈಗೊಳ್ಳಲು ಕಾತರರಾಗಿರುವುದು ಸಂಶಯ ಸೃಷ್ಟಿಸುತ್ತಿದೆ" ಎಂದು ನ್ಯಾ. ಸಿಂಗ್ ಹೇಳಿದರು.
"ಝಾಕಿರ್ ನಾಯ್ಕ್ ತಮ್ಮ ಭಾಷಣಗಳ ಮೂಲಕ ಯುವಕರನ್ನು ಪ್ರಚೋದಿಸುತ್ತಿದ್ದಾರೆ" ಎಂದು ಇಡಿ ವಕೀಲ ಹೇಳಿದಾಗ "ಇಂತಹ ದಾರಿ ತಪ್ಪಿದ ಯುವಕರು ನಮ್ಮನ್ನು ಝಾಕಿರ್ ನಾಯ್ಕ್ ದಾರಿ ತಪ್ಪಿಸಿದರು ಎಂದು ಹೇಳಿದ ಹೇಳಿಕೆಗಳ ಯಾವುದೇ ಸಾಕ್ಷ್ಯವನ್ನು ನೀವು ಒದಗಿಸಿಲ್ಲ. ಢಾಕಾ ಭಯೋತ್ಪಾದಕ ದಾಳಿಗೆ ಅವರ ಭಾಷಣ ಹೇಗೆ ಕಾರಣವಾಯಿತು ಎಂಬುದನ್ನೂ ನೀವು ದೋಷಾರೋಪ ಪಟ್ಟಿಯಲ್ಲಿ ಹೇಳಿಲ್ಲ" ಎಂದು ಹೇಳಿದರು.







