ಜೈಲ್‌ಗೆ ಎಐಜಿಪಿ ಭೇಟಿ: ತನಿಖೆ ನಡೆಸಿ ಸರ್ಕಾರಕ್ಕೆ ವರದಿ
ಮಂಗಳೂರು, ಜ. 9: ಮಂಗಳೂರು ಕಾರಾಗೃಹದಲ್ಲಿ ಸೋಮವಾರ ಕೈದಿಗಳ ನಡುವಿನ ಮಾರಾಮಾರಿ ಘಟನೆಯ ಬಳಿಕ ಕಾರಾಗೃಹ ಮತ್ತು ಬಂಧಿಖಾನೆ ಎಐಜಿಪಿ ವೀರಭದ್ರಯ್ಯ ಮಂಗಳವಾರ ಸಂಜೆ ಕಾರಾಗೃಹಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಕಾರಾಗೃಹದಲ್ಲಿ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆಗೆ ಸಮಾಲೋಚನೆ ನಡೆಸಿದ ಅವರು, ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಮಾರಾಮಾರಿಯಲ್ಲಿ 15ಕ್ಕೂ ಅಧಿಕ ಕೈದಿಗಳು ಗಾಯಗೊಂಡಿದ್ದರು. ಅಲ್ಲದೆ ಜೈಲಿನ ಸಿಸಿ ಟಿವಿ, ಸ್ಕ್ಯಾನರ್‌ಗಳನ್ನು ಪುಡಿಗೈದಿದ್ದರು. ಹಾನಿಗೊಳಗಾದ ಜೈಲಿನ ಸೊತ್ತುಗಳನ್ನು ವೀಕ್ಷಿಸಿದ ವೀರಭದ್ರಯ್ಯ, ಈ ಬಗ್ಗೆ ಎರಡು ದಿನಗಳಲ್ಲಿ ಬಂಧಿಖಾನೆ ಇಲಾಖೆಗೆ ವರದಿ ಸಲ್ಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಮಂಗಳೂರು ಪೊಲೀಸರು ಜೈಲಿಗೆ ಆಗಮಿಸಿ ಸಕಾಲದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದರು. ಜೈಲಿನಲ್ಲಿ ನಡೆದ ಹೊಡೆದಾಟದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೈದಿಗಳು ಹಾಗೂ ಸಿಬ್ಬಂದಿ ಚಿಕಿತ್ಸೆ ಪಡೆದು ಜೈಲ್‌ಗೆ ಮರಳಿದ್ದಾರೆ.





