ನವಜಾತ ಶಿಶುಗಳ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವಲ್ಲ : ಲೋಕಾಯುಕ್ತರ ವರದಿಯಲ್ಲಿ ಕ್ಲೀನ್ ಚಿಟ್
ಕೋಲಾರ,ಜ.9; ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ 3 ನವಜಾತ ಶಿಶುಗಳು ಮೃತಪಟ್ಟಿದ್ದವು. ಈ ಘಟನೆ ರಾಜ್ಯದ ಗಮನ ಸೆಳೆದಿತ್ತು. ಲೋಕಾಯುಕ್ತರು ಸ್ವಯಂ ಪ್ರೇರಿತರಾಗಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಿದ್ದರು. ನವಜಾತ ಶಿಶುಗಳ ಸಾವಿಗೆ ಎಸ್ ಎನ್ ಆರ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ ಕಾರಣವಲ್ಲ. ಪೋಷಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮಗಳನ್ನು ಕೈಗೊಳ್ಳುವಂತೆ ಲೋಕಾಯುಕ್ತ ಶಿಫಾರಸ್ಸು ಮಾಡಿದ್ದಾರೆ.
ಎಸ್ ಎನ್ ಆರ್ ಆಸ್ಪತ್ರೆಯಲ್ಲಿ ಮೂರು ನವಜಾತ ಶಿಶುಗಳು ಮೃತಪಟ್ಟ ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಈ ಘಟನೆ ಆಸ್ಪತ್ರೆಯ ಖ್ಯಾತಿಗೆ ಕಪ್ಪು ಚುಕ್ಕೆಯಾಗಿತ್ತು. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಆರೋಗ್ಯ ಇಲಾಖೆಯ ನಿರ್ದೇಶಕರು ಎಸ್.ಎನ್.ಆರ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಶಿವಕುಮಾರ್ ಮತ್ತು ಮಕ್ಕಳ ತಜ್ಞರಾದ ಡಾ. ಬಾಲಸುಂದರ್ ಹಾಗು ಡಾ.ವಿನಯ್ ಕುಮಾರ್ ಹಾಗು ಪೋಷಕರನ್ನು ವಿಚಾರಣೆ ನಡೆಸಿದ್ದರು.
ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ ತಾಯಿ ಅಪೌಷ್ಟಿಕತೆಯಿಂದ ಬಳಲುತ್ತಿದ್ಸಂದಾಗ ಸಂಬಂಧಪಟ್ಟವರು ಆಕೆಯ ಬಗ್ಗೆ ಗಮನ ಹರಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಮತ್ತು ಪರಿಣಾಮಕಾರಿ ವೈದ್ಯಕೀಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ತಾಯಿ ಅಥವಾ ಶಿಶುಗಳ ಸಾವಿಗೆ ಅಪೌಷ್ಠಿಕತೆ ಕಾರಣವಾಗಿದೆ. ಇಂತಹ ಘಟನೆಗಳು ರಾಜ್ಯದ ಇತರ ಜಿಲ್ಲೆಗಳಲ್ಲೂ ಸಂಭವಿಸಿವೆ. ಮತ್ತೊಂದು ಶಿಶು ತಾಯಿಯ ಗರ್ಭದಲ್ಲಿದ್ದಾಗ ಮೆದುಳಿನ ಭಾಗ ಬೆಳವಣಿಗೆ ಆಗಿಲ್ಲ. ಇಂತಹ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಇಡೀ ರಾಜ್ಯದಲ್ಲಿಯೇ ಸೌಲಭ್ಯ ಇಲ್ಲದಿರುವುದು ಕಳವಳಕಾರಿ ವಿಷಯ. ತಾಯಿ ಗರ್ಭವತಿಯಾಗಿದ್ದಾಗ ಅಪೌಷ್ಟಿಕತೆಯಿಂದ ಶಿಶು ಸಾವಿಗೀಡಾಗಿದೆ ಎಂದರು.
ಮೆದುಳು ಬೆಳವಣಿಗೆಯಾಗದೆ ಜನಿಸುವ ಶಿಶು ಸಮಾಜ ಮತ್ತು ಪೋಷಕರಿಗೆ ಹೊರೆಯಾಗುತ್ತದೆ. ಇದರಿಂದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗಳು ಪರಿಹಾರದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಶಿಶುಗಳ ಮರಣ ಗಂಭೀರ ವಿಷಯವಾಗಿದ್ದು ಸಂಬಂಧಪಟ್ಟವರು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ.
ನವಜಾತ ಶಿಶುಗಳು ಆಕಸ್ಮಿಕವಾಗಿ ಮೃತಪಟ್ಟವು ಆದರೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೆಂದು ಮಾದ್ಯಮಗಳಲ್ಲಿ ಬಿಂಬಿಸಲಾಯಿತು. ಈ ಘಟನೆಯನ್ನು ಘೋರಖ್‍ಪುರ ಘಟನೆಗೆ ತಳುಕು ಹಾಕಲಾಗಿತ್ತು. ನವಜಾತ ಶಿಶುಗಳ ಸಾವಿನ ನಿಖರ ಕಾರಣಗಳನ್ನು ಲೋಕಾಯುಕ್ತರ ಮುಂದೆ ಮಂಡಿಸಲಾಯಿತು. ವೈದ್ಯರ ನಿರ್ಲಕ್ಷ್ಯ ಕಾರಣವಲ್ಲವೆಂದು ಲೋಕಾಯುಕ್ತರು ವರದಿ ನೀಡಿರುವುದು ನಮ್ಮ ನೋವಿನ ಶಮನವಾಗಿದೆ.
- ಡಾ.ಶಿವಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ,ಎಸ್.ಎನ್.ಆರ್. ಆಸ್ಪತ್ರೆ.







